ಮಂಗಳೂರು: ನಕಲಿ NCIB ಅಧಿಕಾರಿ ಎಂದು ಪರಿಚಯಿಸಿಕೊಂಡು ವಂಚನೆ ಹಾಗೂ ಸುಲಿಗೆ ಮಾಡುತ್ತಿದ್ದ ಸ್ಯಾಮ್ ಪೀಟರ್ ಅಲಿಯಾಸ್ ಡ್ಯಾನಿ ತಾರಕನ್ (64)ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಲಖನೌನಲ್ಲಿ ಪತ್ತೆಹಚ್ಚಲಾಗಿದೆ. ಹಣಕಾಸು, ಬ್ಯಾಂಕ್ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿದವರನ್ನು ಗುರಿಯಾಗಿಸಿಕೊಂಡು, ತಾನು ಉನ್ನತಾಧಿಕಾರಿ ಎಂದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ತನ್ನ ಗುರುತು ಮರೆಮಾಚಲು ಹಲವು ನಕಲಿ ಹೆಸರುಗಳನ್ನು ಬಳಸುತ್ತಿದ್ದ ಈತನ ವಿರುದ್ಧ 2001ರಿಂದ ‘ರಾಹುಲ್ ಪೀಟರ್’ ಹೆಸರಿನಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಂಚನೆ ಹಾಗೂ ಸುಲಿಗೆಗೆ ಸಂಬಂಧಿಸಿದ ಸುಮಾರು 17 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಹಲವು ವಾರೆಂಟ್‌ಗಳು ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

