ಹಾಸನ: ಆಸ್ತಿ ಹಂಚಿಕೆ ಹಾಗೂ ರೇಷನ್ ಕಾರ್ಡ್ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ. ದೇವರಾಜ್ ಎಂಬಾತ ತನ್ನ ಸಹೋದರ ರಘು (35)ಗೆ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಘು ಮೃತಪಟ್ಟಿದ್ದಾರೆ. ಸಹೋದರರಿಬ್ಬರಿಗೂ ಸೇರಿ 7ರಿಂದ 8 ಎಕರೆ ಜಮೀನು ಇದ್ದು, ಅದರಲ್ಲಿ 3 ಎಕರೆ ಜಮೀನು ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ. ಬಂದ ಹಣದಲ್ಲಿ ತಮ್ಮನ ಪಾಲು ನೀಡುವಂತೆ ರಘು ಕೇಳುತ್ತಿದ್ದರೂ ದೇವರಾಜ್ ಹಣ ನೀಡದೆ ಸಬೂಬು ಹೇಳುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸೆ.24ರಂದು ರೇಷನ್ ಕಾರ್ಡ್ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ದೇವರಾಜ್ ಚಾಕುವಿನಿಂದ ರಘು ಮೇಲೆ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ರಘುವನ್ನು ಬೇಲೂರು ಹಾಗೂ ಹಾಸನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ದೇವರಾಜ್ ಹಾಗೂ ಆತನ ಪತ್ನಿ ಗೀತಾಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

