ಮುಂಡಗೋಡ ತಾಲೂಕಿನಲ್ಲಿ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ, ಮುಸ್ಲಿಂ ಸಮಾಜ ಹಾಗೂ ಅಹ್ಲ್ ಎ ಸುನ್ನತ್ ಜಮಾತ್ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬನ್ನಿಕಟ್ಟೆಯ ನೂರಾನಿ ಮಸೀದಿಯಿಂದ ಕಪ್ಪು ಪಟ್ಟಿ ಧರಿಸಿ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿ, ಸಿಪಿಐ ರಮೇಶ ಹಾನಾಪುರ ಅವರಿಗೆ ಮನವಿ ಸಲ್ಲಿಸಲಾಯಿತು. ಶಿವಾಜಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಸಂತ್ರಸ್ತ ಬಾಲಕಿಗೆ ಸೂಕ್ತ ವೈದ್ಯಕೀಯ, ಮಾನಸಿಕ ಹಾಗೂ ಕಾನೂನು ನೆರವು ಒದಗಿಸಬೇಕು. ಮಕ್ಕಳ ಸುರಕ್ಷತೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರಜಾಖಾನ ಪಠಾಣ, ಮಹ್ಮದಗೌಸ ಮಕಾನದಾರ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news
