ಟೌಂಟನ್: ಶಕೀಬ್ ಆಲ್ ಹಸನ್ (124*) ಶತಕ ಹಾಗೂ ಲಿಟನ್ ದಾಸ್ (94*) ಅವರ ಸ್ಫೋಟಕ ಅರ್ಧ ಶತಕ ನೆರವಿನಿಂದ ಬಾಂಗ್ಲಾದೇಶ ವಿಶ್ವಕಪ್ನ 23ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.ಇಲ್ಲಿನ ದಿ ಕಾಪರ್ ಆಸೋಸಿಯೇಷನ್ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ 41.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ ಗೆಲುವಿನ ನಗೆ ಬೀರಿತು.ಆರಂಭಿಕರಾಗಿ ಕ್ರೀಸ್ಗೆ ಬಂದ ಬಾಂಗ್ಲಾದ ತಮೀಮ್ ಇಕ್ಬಾಲ್ (48) ಅರ್ಧ ಶತಕದಂಚಿನಲ್ಲಿ ಔಟಾದರೆ, ಸೌಮ್ಯ ಸರ್ಕಾರ್ (29) ಹಾಗೂ ಮುಷ್ತಾಫಿಜುರ್ ರಹೀಮ್ (1) ಶೀಘ್ರ ಪೆವಿಲಿಯನ್ ಸೇರಿದರು. ಬಳಿಕ ಬಂದ ಶಕೀಬ್ ಆಲ್ ಹಸನ್ ಹಾಗೂ ಲಿಟನ್ ದಾಸ್ ಜತೆಯಾಟ ತಂಡಕ್ಕೆ ಹೆಚ್ಚಿನ ಮೊತ್ತ ನೀಡುವ ಮೂಲಕ ತಂಡ ಗೆಲುವಿನ ರೂವಾರಿಗಳಾಗಿ ಮಿಂಚಿದರು.ಶಕೀಬ್ 99 ಎಸೆತಗಳಲ್ಲಿ 16 ಬೌಂಡರಿಗಳೊಂದಿಗೆ 124 ರನ್ನೊಂದಿಗೆ ಏಕದಿನ ವೃತ್ತಿ ಜೀವನದಲ್ಲಿ 9ನೇ ಶತಕ ದಾಖಲಿಸಿದರು. ಲಿಟನ್ ದಾಸ್ ವೇಗವಾಗಿ ಬ್ಯಾಟಿಂಗ್ ಮಾಡುವ ಮೂಲಕ 69 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 94 ರನ್ ಗಳಿಸಿ ಸಂಭ್ರಮಿಸಿದರು.ಇನ್ನು ವಿಂಡೀಸ್ ಪರ ಬೌಲಿಂಗ್ ಮಾಡಿದ ಆ್ಯಂಡ್ರೆ ರಸೆಲ್ ಹಾಗೂ ಒಶಾನೆ ಥಾಮಸ್ ತಲಾ ಒಂದು ವಿಕೆಟ್ ಪಡೆದರೆ, ಉಳಿದವರು ಬಾಂಗ್ಲಾ ರನ್ ಹೊಳೆಗೆ ಕಡಿವಾಣ ಹಾಕುವಲ್ಲಿ ವಿಫಲರಾದರು.ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಉತ್ತಮ ಆಟವಾಡಿದರೂ ಕೊನೆಗೆ ಸೋಲಿನ ರುಚಿ ಕಾಡಿತು. ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದ ಕ್ರಿಸ್ ಗೇಲ್ ತೀರಾ ಕಳಪೆ ಆಟದೊಂದಿಗೆ ಶೂನ್ಯಕ್ಕೆ ಔಟಾದರೆಮತ್ತೊಬ್ಬ ಆರಂಭಿಕ ಇವಿನ್ ಲೆವಿಸ್ (70), ಶೈ ಹೋಪ್ (96) ಹಾಗೂ ಶಿಮ್ರೋನ್ ಹೇಟ್ಮೆರ್ (50) ಉತ್ತಮ ಆಟವಾಡಿದರು. ಬಳಿಕ ಬಂದ ನಾಯಕ ಜೇಸನ್ ಹೋಲ್ಡರ್ (33) ಸಾಧಾರಣ ಆಟವಾಡಿದರು.ಬಾಂಗ್ಲಾ ಪರ ಬೌಲಿಂಗ್ ಮಾಡಿದ ಮೊಹಮ್ಮದ್ ಸೈಫುದ್ದೀನ್ ಹಾಗೂ ಮುಷ್ತಾಫಿಜುರ್ ರಹೀಮ್ ತಲಾ 3 ವಿಕೆಟ್ ಕಬಳಿಸಿದರೆ, ಶಕೀಬ್ ಆಲ್ ಹಸನ್ ಎರಡು ವಿಕೆಟ್ ತನ್ನದಾಗಿಸಿಕೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news




