ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿಯ ನ್ಯೂ ಇಂಗ್ಲೀಷ್ ಸ್ಕೂಲ್ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಶಾಲೆಯಲ್ಲಿ ವ್ಯಾಸಂಗ ಮಾಡಿದ ಶಾಲೆಯ 1968-69 ರ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಬಳಗದ ವತಿಯಿಂದ ಸುವರ್ಣ ಗುರುವಂದನೆ ಕಾರ್ಯಕ್ರಮವನ್ನು ಇದೇ ಜುಲೈ 3 ರಂದು ನ್ಯೂ ಇಂಗ್ಲೀಷ್ ಸ್ಕೂಲ್ ನ ಕದಿಂದಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಶಾಲೆಯ ವಿದ್ಯಾರ್ಥಿಗಳಾದ ರಾಮಕೃಷ್ಣ ಧೋಂಗಡಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಸಂಸ್ಥೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ವ್ಯಾಸಂಗ ಮಾಡಿದ ನ್ಯೂ ಇಂಗ್ಲೀಷ್ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಸುಮಧುರ ಮಿಲನ ಹಾಗೂ ಇಂದು ವಿದ್ಯಾರ್ಥಿಗಳು ಉನ್ನತ ಸ್ಥಾನ ಹೊಂದಲು ಸಹಕಾರಿಯಾದ ಗುರುಗಳಿಗೆ ಗೌರವ ಸೂಚಿಸುವ ಉದ್ದೇಶದಿಂದ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಹಳೇ ವಿದ್ಯಾರ್ಥಿಗಳ ಬಳಗದಿಂದ ಶಾಲೆಗೆ 6 ಕಂಪ್ಯೂಟರ್ ಗಳನ್ನು ವಿತರಣೆ ಮಾಡಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಹಾಗೂ ನ್ಯೂ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಿ.ಆರ್. ಇಂಗಳಗಿ ವಹಿಸಲಿದ್ದಾರೆ. ಅತಿಥಿಗಳಾಗಿ ನ್ಯಾಯವಾದಿ ಎನ್.ಇ.ಎಸ್. ನ ಗೌರವ ಕಾರ್ಯದರ್ಶಿಗಳಾದ ಶ್ರೀಕಾಂತ ದೇಸಾಯಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ ಗಜೇಂದ್ರಗಡ, ಲಕ್ಷ್ಮಣ ದಲಬಂಜನ, ಗುಂಡಪ್ಒ ದೇಸಾಯಿ, ಗುರುರಾಜ ತೊರವಿ, ಲಕ್ಷ್ಮಣ ಜೋಶಿ, ರಮೇಶ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





