ಬೆಂಗಳೂರು:ಮನಸಿದ್ದರೆ ಮಾರ್ಗ ಎಂಬ ಒಂದು ಮಾತಿದೆ. ಈ ಮಾತನ್ನು ಅದೆಷ್ಟು ಜನ ನಿಜ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಇಲ್ಲೋರ್ವ ಛಲ ಬಿಡದ ಯುವಕ ಈ ಮಾತನ್ನು ಸಾಬೀತು ಮಾಡಿದ್ದಾನೆ.ಬೆಳಗಾವಿ ಜಿಲ್ಲೆ ಮನ್ನೂರು ಗ್ರಾಮದ ನಿಶಾನ್ ಮನೋಹರ್ ಕದಂ ಎಂಬ ಬಾಕ್ಸರ್ ಕ್ರೀಡಾಪಟು 45 ನಿಮಿಷಗಳಲ್ಲಿ 2.5 ಕಿಮೀ ಪ್ರವಾಹದ ನೀರಿನಲ್ಲಿ ಈಜಿ ಹೋಗಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.ಹೌದು, ಆಗಸ್ಟ್ 7ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್ಶಿಪ್ ಇತ್ತು. ಆದರೆ ಆ ಸಮಯದಲ್ಲಿ ಬೆಳಗಾವಿ ಸುತ್ತಮುತ್ತ ಭೀಕರ ಪ್ರವಾಹ ಇದ್ದು, ಎಲ್ಲಾ ಹಳ್ಳಿಗಳು ಮುಳುಗಡೆಯಾಗಿದ್ದವು. ಈ ಪ್ರವಾಹದಲ್ಲಿ ಸಿಲುಕಿದ್ದವರ ಪೈಕಿ ಮನ್ನೂರು ನಿವಾಸಿ ನಿಶಾನ್ ಮನೋಹರ್ ಕದಂ ಒಬ್ಬರಾಗಿದ್ದರು.ಈ ಕ್ರೀಡಾ ಪಟು ಆಗಸ್ಟ್ 7 ರಂದು ಬೆಂಗಳೂರಲ್ಲಿ ನಡೆಯಲಿದ್ದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರ ಗ್ರಾಮ ನೀರಲ್ಲಿ ಮುಳುಗಿತ್ತು. ಕತ್ತು ಮಟ್ಟದವರೆಗೆ ಆ ಪ್ರದೇಶದಲ್ಲಿ ನೀರು ತುಂಬಿತ್ತು. ಮನ್ನೂರು ಊರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಮೂರು ರಸ್ತೆಗಳು ಸಹ ಪ್ರವಾಹದಿಂದ ಹಾನಿಯಾಗಿದ್ದವು.ಆದರೆ ನಿಶಾನ್ ತಂದೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಬೇಕೆಂದಿದ್ದ ಮಗನ ಆಸೆಗೆ ತಣ್ಣಿರೆರೆಚಲಿಲ್ಲ. ಕ್ರೀಡೆಯಲ್ಲಿ ಭಾಗಿಯಾಗೆಂದು ಮನೋಹರ್ಗೆ ಧೈರ್ಯ ತುಂಬಿದರು. ನಂತರ ಬಾಕ್ಸಿಂಗ್ ಕಿಟ್ ಅನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿಕೊಂಡು ಬರೋಬ್ಬರಿ 2.5 ಕಿಮೀ ಈಜಿ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಳಿ ತಲುಪಿದರು. ಇನ್ನು 3.45ಕ್ಕೆ ಈಜಲು ಪ್ರಾರಂಭಿಸಿದ ನಿಶಾನ್ 4.30ಕ್ಕೆ ರಸ್ತೆ ಸೇರಿದರು. ನಂತರ ತಮ್ಮ ತಂಡದೊಂದಿಗೆ ರೈಲಿನಲ್ಲಿ ಬೆಂಗಳೂರು ಸೇರಿದರು.ಕೊನೆಗೂ ನಿಶಾನ್ ಬೆಂಗಳೂರು ತಲುಪಿ ಬಾಕ್ಸಿಂಗ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದೇ ತೀರಿದರು. ಇನ್ನು ಈ ಬಗ್ಗೆ ಮಾತನಾಡಿರುವ ನಿಶಾನ್, ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ಈ ಸಂದರ್ಭವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಲು ನಾನು ಬಯಸಿರಲಿಲ್ಲ ಎಂದು ಹೇಳಿದ್ದಾರೆ. ಪ್ರವಾಹ ಇದ್ದಿದ್ದರಿಂದ ಯಾವ ವಾಹನವೂ ಗ್ರಾಮದೊಳಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಈಜಿ ಹೋಗದ ಹೊರತು ಬೇರೆ ದಾರಿ ಕಾಣಲಿಲ್ಲ ಅಂತ ತಮ್ಮ ಕಷ್ಟವನ್ನು ನಿಶಾನ್ ಬಿಚ್ಚಿಟ್ಟರು.ಈ ಬಾರಿ ನನ್ನ ಬ್ಯಾಡ್ ಲಕ್ನಿಂದ ಚಿನ್ನದ ಪದಕವನ್ನು ಮಿಸ್ ಮಾಡಿಕೊಂಡಿದ್ದೇನೆ. ಆದ್ರೆ ಮುಂದಿನ ಬಾರಿ ನಾನು ಚಿನ್ನದ ಪದಕವನ್ನು ಪಡೆದೇ ತೀರುತ್ತೇನೆ ಎಂದು ನಿಶಾನ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





