ಬೆಂಗಳೂರು: ಚೊಚ್ಚಲ ಬಜೆಟ್ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಸಾಲಮನ್ನಾ ಘೋಷಣೆಯ ಒಳಮರ್ಮಕ್ಕೆ ಆರ್ಥಿಕ ತಜ್ಞರೇ ತಬ್ಬಿಬ್ಬಾಗಿದ್ದಾರೆ! ಸಾಲಮನ್ನಾದ 34 ಸಾವಿರ ಕೋಟಿ ರೂ.ಗಳ ಹೊರೆ ಇಳಿಸಿಕೊಳ್ಳುವುದಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಸ್ಪಷ್ಟತೆ ಇಲ್ಲವೆಂಬುದು ಒಂದಾದರೆ, ಮನ್ನಾ ಜಾರಿಗೆ ಬ್ಯಾಂಕ್ಗಳ ಸಮ್ಮತಿ ದೊರೆಯುವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಹಾಗೂ ಹೀಗೂ ಘೋಷಣೆ ಅನುಷ್ಠಾನಗೊಂಡಿದ್ದೇ ಆದಲ್ಲಿ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕವೂ ಕಾಡಲಾರಂಭಿಸಿದೆ.
ರಾಜ್ಯದ 40 ಲಕ್ಷ ರೈತರಿಗೆ 34 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಘೋಷಿಸಿರುವುದರಿಂದ ಅಷ್ಟು ಪ್ರಮಾಣದ ಸಾಲ ತೀರಿಸಲು ಹಣ ಎಲ್ಲಿಂದ ತರಲಾಗುವುದೆಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದರಿಂದಾಗಿ ಮನ್ನಾ ಭಾಗ್ಯ ನಿಜಕ್ಕೂ ಜಾರಿಯಾಗುವುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕುಮಾರಸ್ವಾಮಿ ಅವರ ಈ ನಡೆ ಆರ್ಥಿಕ ಶಿಸ್ತು ಹಳಿ ತಪ್ಪಿಸುವ ಆತಂಕದ ಜತೆಗೆ ದೂರಗಾಮಿ ಪರಿಣಾಮಗಳ ಅಪಾಯದ ಸುಳಿಗೂ ಸಿಲುಕಿಸಿದೆ. ರಾಜ್ಯಕ್ಕೆ ಇರುವುದು ಸೀಮಿತ ಸಂಪನ್ಮೂಲ. ಅದರ ಜತೆಗೆ ಬದ್ಧತಾ ವೆಚ್ಚಗಳ ಅಭಿವೃದ್ಧಿ ಫಲಿತಾಂಶಗಳನ್ನು ಜೋಡಣೆ ಮಾಡುವ ಗಂಭೀರ ಸವಾಲಿಗೂ ಮುನ್ನುಡಿ ಬರೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





