Breaking News

ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ; ಕಾಂಗ್ರೆಸ್ ನಲ್ಲಿ ಹೆಚ್ಚಿದೆ ಲಾಬಿ ತಂತ್ರ..

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಸೆಪ್ಟೆಂಬರ್ 3 ನೇ ವಾರದಲ್ಲಿ  ನಡೆಯುವುದಾಗಿ ಘೋಷಣೆಯಾದ ನಂತರ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಲಾಬಿ ನಡೆಸಲು ಆರಂಭಿಸಿದ್ದಾರೆ. ಸರ್ಕಾರದಲ್ಲಿ 6 ಸಚಿವ ಸ್ಥಾನ ಖಾಲಿ ಇದ್ದು ಕಾಂಗ್ರೆಸ್ ನಿಂದ ನಾಲ್ಕು ಅಥವಾ ಐದು ಸಚಿವ ಸ್ಥಾನಗಳು ತುಂಬುವ ಸಾಧ್ಯತೆಯಿದೆ.
ಸಮ್ಮಿಶ್ರ ಸರ್ಕಾರ ರಚನೆ ಮತ್ತು ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ ನಲ್ಲಿ ಕೆಲವು ಅಸಮಾಧಾನಗೊಂಡಿರುವ ಹಿರಿಯ ಸಚಿವರುಗಳನ್ನು ಸಂಪುಟ ವಿಸ್ತರಣೆ ವೇಳೆ ಸಮಾಧಾನಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ನಲ್ಲಿರುವ ಹಲವು ಹಿರಿಯ ನಾಯಕರಾದ ರಾಮಲಿಂಗಾ ರೆಡ್ಡಿ, ಹೆಚ್ ಕೆ ಪಾಟೀಲ್, ಎಂ ಬಿ ಪಾಟೀಲ್, ರೋಶನ್ ಬೇಗ್, ಸತೀಶ್ ಜಾರಕಿಹೊಳಿ ಮತ್ತು ಎಸ್ ಆರ್ ಪಾಟೀಲ್ ಸಮ್ಮಿಶ್ರ ಸರ್ಕಾರ ರಚನೆಗೊಂಡ ನಂತರ ಅತೃಪ್ತಗೊಂಡ ನಾಯಕರಾಗಿದ್ದಾರೆ. ಆರಂಭದಲ್ಲಿ ಎಂ ಬಿ ಪಾಟೀಲ್ ಅವರು ಪಕ್ಷದ ಕೆಲವು ಶಾಸಕರೊಂದಿಗೆ ಗುಂಪು ರಚಿಸಿಕೊಂಡು ಬಂಡಾಯ ಏಳುವ ಬೆದರಿಕೆಯನ್ನು ಕೂಡ ಹಾಕಿದ್ದರು. ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಮಧ್ಯ ಪ್ರವೇಶಿಸಿ ಮತ್ತು ರಾಹುಲ್ ಗಾಂಧಿಯವರು ಎಂ ಬಿ ಪಾಟೀಲ್ ಅವರನ್ನು ದೆಹಲಿಗೆ ಕರೆದು ಮಾತುಕತೆ ನಡೆಸಿ ಆ ವಿವಾದವನ್ನು ತಣ್ಣಗಾಗಿಸಿದರು.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ ರಾಮಲಿಂಗಾ ರೆಡ್ಡಿ ಮತ್ತು ಎಸ್ ಆರ್ ಪಾಟೀಲ್ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ರಾಮಲಿಂಗಾ ರೆಡ್ಡಿಯವರನ್ನು ಸೇರಿಸಿಕೊಂಡರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೂರು ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಗೆ ವರದಾನವಾಗಲಿದೆ.
ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಎಸ್ ಆರ್ ಪಾಟೀಲ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡುವಂತೆ ಶಿಫಾರಸು ಮಾಡುವ ಸಾಧ್ಯತೆಯಿದೆ. ಲಿಂಗಾಯತ ಸಮುದಾಯದ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಎಸ್ ಆರ್ ಪಾಟೀಲ್ ಅವರು, ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಮತ್ತು ಚಳ್ಳಕೆರೆ ಶಾಸಕ ರಘುಮೂರ್ತಿ ಅವರನ್ನು ಕೂಡ ಸಂಪುಟ ಸೇರ್ಪಡೆಗೆ ಪರಿಗಣಿಸುವ ಸಾಧ್ಯತೆಯಿದೆ.
ಸಚಿವಾಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ ನಲ್ಲಿ ಹೆಚ್ಚಾಗಿದ್ದು ಕೆಲವು ಅತೃಪ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸುವ ಸಾಧ್ಯತೆಯಿದೆ. ಸಚಿವ ಸಂಪುಟ ವಿಸ್ತರಣೆ ಜೊತೆಗೆ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಕೂಡ ನಡೆಯಲಿದೆ.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *