ನಿನ್ನೆ ಅಮೃತಸರದಲ್ಲಿ ನಡೆದ ರೈಲು ದುರಂತದ ಬಗ್ಗೆ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಪ್ರತಿಕ್ರಿಯಿಸಿದ್ದು, ಯಾರೂ ಬೇಕಂತ ಇದನ್ನ ಮಾಡಿಲ್ಲ. ಇದೊಂದು ದುರಾದೃಷ್ಟಕರ ಘಟನೆ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.ನಿನ್ನೆ ಅಮೃತಸರದಲ್ಲಿ ವಿಜಯದಶಮಿ ಆಚರಣೆ ವೇಳೆ ರೈಲು ದುರಂತ ಸಂಭವಿಸಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳ ಮೇಲೆ ಈ ಘಟನೆಯಿಂದ ಸಾಕಷ್ಟು ಒತ್ತಡ ಬಿದ್ದಿದೆ. ರೈಲು ದುರಂತದಿಂದಾಗಿ ಈವರೆಗೆ 60 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಧು, ಯಾರೂ ಬೇಕಂತ ಹೀಗೆ ಮಾಡಿಲ್ಲ. ಇದು ಬೇಜವಾಬ್ದಾರಿತನದಿಂದ ಆಗಿರುವುದು ನಿಜ. ನಾನು ಬೇಜವಾಬ್ದಾರಿತನ ಎಂದಾಗ ಸಾಕಷ್ಟು ಜನರಿಗೆ ತಮ್ಮ ಜವಾಬ್ದಾರಿ ಬಗ್ಗೆ ಇನ್ನೂ ಗೊತ್ತಾಗಿರಲ್ಲ. ಆದ್ರೆ ಯಾರೂ ಇದನ್ನ ಬೇಕಂತ ಮಾಡಿದ್ದಲ್ಲ. ಇದು ಯಾರದ್ದೋ ದುರುದ್ದೇಶದಿಂದ ನಡೆದಿರುವ ಘಟನೆಯಲ್ಲ. ಮತ್ತೊಂದು ವಿಚಾರವೆಂದರೆ ಸಾಕಷ್ಟು ಬಾರಿ ದೇವರ ಇಚ್ಛೆ ಮುಂದೆ ಮಾನವ ಅಸಹಾಯಕನಾಗಿರುತ್ತಾನೆ ಎಂದು ಹೇಳಿದ್ದಾರೆ.ಪ್ರಾಥಮಿಕ ತನಿಖೆಯ ಪ್ರಕಾರ ದಸರಾ ಆಚರಣೆಗೆ ಅನುಮತಿಯೇ ಪಡೆದಿರಲಿಲ್ಲ ಎಂದು ತಿಳಿದುಬಂದಿದೆ. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಸಿಧು ಪತ್ನಿ ನವಜೋತ್ ಕೌರ್ ಸಿಧು, ಅವಘಡ ಸಂಭವಿಸುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರೋ ಸಿಧು, ಇದರಲ್ಲಿ ರಾಜಕೀಯ ಮಾಡಬಾರದು. ಯಾರೂ ಇದನ್ನ ಬೇಕಂತ ಮಾಡಿಲ್ಲ. ಒಂದು ವಿಷಯ ಅರ್ಥ ಮಾಡಿಕೊಳ್ಳಿ. ನಾನು ಇಲ್ಲಿ ಚುನಾವಣೆ ಎದುರಿಸಿದ್ದರೆ ಅದು ನನ್ನ ಹೆಂಡತಿಯಿಂದಲೇ. ಆಕೆ ಎಲ್ಲಾ ಗ್ರೌಂಡ್ ವರ್ಕ್ ಮಾಡುತ್ತಾಳೆ. ನಿನ್ನೆ ರಾತ್ರಿ ಈ ರೀತಿಯ ಆರೋಪಗಳು ಕೇಳಿಬಂದಾಗ ಆಕೆ ಆಸ್ಪತ್ರೆಯಲ್ಲಿದ್ದಳು. ಆಕೆ ಮನೆಗೆ ಬರುವ ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ಘಟನೆ ಬಗ್ಗೆ ಮಾಹಿತಿ ತಿಳಿದಳು. ಈ ದುರಂತಕ್ಕೆ ರಾಜಕೀಯ ಬಣ್ಣ ನೀಡಬೇಡಿ. ಇದೊಂದು ಅವಘಡ. ತಪ್ಪು ಆರೋಪಗಳನ್ನ ಮಾಡಬೇಡಿ ಎಂದು ಹೇಳಿದ್ದಾರೆ.ನಿನ್ನೆ ವಿಜಯ ದಶಮಿ ಅಂಗವಾಗಿ ರೈಲು ಹಳಿ ಬಳಿ ರಾವಣನ ಪ್ರತಿಕೃತಿ ದಹನ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರೀ ಪ್ರಮಾಣದ ಪಟಾಕಿಗಳನ್ನೂ ಸಿಡಿಸಲಾಗುತ್ತಿತ್ತು. ಈ ವೇಳೆ ರೈಲು ಬಂದಿದ್ದು ಗೊತ್ತಾಗದೇ ಜನರು ಹಳಿಯ ಮೇಲೆಯೇ ನಿಂತಿದ್ದರು. ಆಗ ಯಮರೂಪಿ ರೈಲು ನೂರಕ್ಕೂ ಹೆಚ್ಚು ಜನರ ಮೇಲೆ ಹರಿದು ಹೋಗಿದೆ. ಪರಿಣಾಮ 60ಕ್ಕೂ ಹೆಚ್ಚು ಜನರು ಮೃತಪಟ್ಟು, 70ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





