ಗುವಾಹಟಿ: ದೇಶದಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚಿದ್ದು, ಅಸ್ಸಾಂನಲ್ಲಿ ನೆತ್ತರ ಹೊಳೆಯನ್ನ ಹರಿಸಿದ್ದಾರೆ. ಅಸ್ಸಾಂನ ಕೆರಾಬಾರಿ ಪ್ರದೇಶದ ದ್ಹೋಲಾ ಸದಿಯಾ ಬ್ರಿಡ್ಜ್ ಬಳಿ ಬೆಂಗಾಲಿ ಸಮುದಾಯದ 6 ಮಂದಿ ಮೇಲೆ ಶಂಕಿತ ಉಲ್ಫಾ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡಿರುವ ಮತ್ತೋರ್ವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಶ್ಯಾಮ್ಲಾಲ್ ಬಿಸ್ವಾಸ್, ಅನಂತ ಬಿಸ್ವಾಸ್, ಅಭಿನಾಶ್ ಬಿಸ್ವಾಸ್, ಸುಬಾಲ್ ಬಿಸ್ವಾಸ್ ಮತ್ತು ಧನಂಜಯ್ ನಮ್ಸುದ್ರ ಎಂದು ಗುರುತಿಸಲಾಗಿದೆ.ಉಗ್ರರ ಕೃತ್ಯಕ್ಕೆ ಭಾರೀ ಖಂಡನೆಉಗ್ರ ಕೃತ್ಯಕ್ಕೆ ಪ್ರತಿಕ್ರಿಯಿಸಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ರಾಜ್ಯದ ಹಲವು ಭಾಗಗಳಲ್ಲಿ ಇಂತಹ ಹತ್ಯೆಗಳನ್ನು ಖಂಡಿಸಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಅಮಾಯಕರ ಮೇಲಿನ ದಾಳಿಯನ್ನ ಖಂಡಿಸಿರುವ ರಾಜನಾಥ್ ಸಿಂಗ್ ಘೋರ ಕೃತ್ಯವೆಸಗಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಅಸ್ಸಾಂ ಸಿಎಂ ಸರ್ಬಾನಂದ ಸೋನೋವಾಲಾಗೆ ಸೂಚಿಸಿದ್ದಾರೆ. ಘಟನೆಯ ಬಳಿಕ ತಕ್ಷಣವೇ ರಾಜ್ಯ ಸಚಿವರಾದ ಕೇಶವ ಮಹಂತಾ ಮತ್ತು ಟೋಪೋನ್ ಕುಮಾರ್ ಗೊಗೊಯಿ ಅವರಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯ ಮಾಹಿತಿ ಪಡೆದುಕೊಳ್ಳುವಂತೆ ಅಸ್ಸಾಂ ಸಿಎಂ ಆದೇಶಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





