ಬೆಂಗಳೂರು: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕಳೆದುಕೊಂಡು ಅಭಿಮಾನಿಗಳ ನೋವು ಮೇಲ್ನೋಟಕ್ಕೆ ಕಣ್ಮರೆಯಾಗಿದೆಯಷ್ಟೇ. ಆದರೆ, ಒಳಗಿನ ನೋವು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅಪ್ಪು ನಮ್ಮ ನಿಮ್ಮನೆಲ್ಲಾ ಅಗಲಿ ಎರಡು ತಿಂಗಳಾಗುತ್ತಾ ಬರುತ್ತಿದೆ. ಆದರೂ, ಅಪ್ಪು ಪುನೀತ್ ಸಮಾಧಿ ಮುಂದೆ ಅಭಿಮಾನಿಗಳ ಆಗಮನ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗಿತ್ತಲೇ ಇದೆ.
ಕೇವಲ ಕರ್ನಾಟಕ ಅಷ್ಟೇ ಅಲ್ಲ. ಹೊರ ರಾಜ್ಯದಿಂದಲೂ ಪುನೀತ್ ಸಮಾಧಿಯನ್ನು ನೋಡಲು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಪ್ರತಿ ದಿನ ಸಮಾಧಿ ವೀಕ್ಷಣೆಗೆಂದು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ವಿನ: ಕಡಿಮೆ ಆಗುತ್ತಿಲ್ಲ. ಪುನೀತ್ ಅಭಿಮಾನಿಗಳು ತಮ್ಮ ಸ್ವಂತ ಖರ್ಚಿನೊಂದಿಗೆ ಸಮಾಧಿ ಬಂದು ಪುನೀತ್ ದರ್ಶನ ಪಡೆಯುತ್ತಿದ್ದಾರೆ. ಆದರೆ, ಧಾರವಾಡದ ಅಪ್ಪು ಅಭಿಮಾನಿಯೊಬ್ಬರು ಕಳೆದ ತಿಂಗಳು ಓಟದ ಮೂಲಕವೇ ಸಮಾಧಿ ತಲುಪುವ ಶಪಥ ಮಾಡಿದ್ದರು. ಅದರಂತೆ ಇಂದು(ಡಿಸೆಂಬರ್ 14)ರಂದು ಪುನೀತ್ ಸಮಾಧಿ ತಲುಪಿ, ವಿಶೇಷ ನಮನ ಸಲ್ಲಿಸಿದ್ದಾರೆ. ಈ ವೇಳೆ ಯುವರಾಜ್‌ಕುಮಾರ್ 420ಕಿ.ಮೀ ರನ್ನಿಂಗ್ ಮಾಡಿ ಅಪ್ಪು ಸಮಾಧಿ ತಲುಪಿದ ದ್ರಾಕ್ಷಾಯಿಣಿಗೆ ಸನ್ಮಾನ ಮಾಡಿದರು.
420 ಕಿಮೀ ಓಡೋಡಿ ಬಂದ ಅಪ್ಪು ಅಭಿಮಾನಿ
ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಉಮೇಶ ಪಾಟೀಲ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಅಪ್ಪು ಅಗಲಿದ ನೋವಿನಲ್ಲಿ ದ್ರಾಕ್ಷಾಯಿಣಿ ಓಟದ ಮೂಲಕವೇ ಸಮಾಧಿ ತಲುವುವ ಶಪಥ ಮಾಡಿದ್ದರು. ಅದರಂತೆ, ನವೆಂಬರ್ ಕೊನೆ ವಾರದಲ್ಲಿ ಮನಗುಂಡಿಯಿಂದ ದ್ರಾಕ್ಷಾಯಿಣಿ ಓಟ ಆರಂಭಿಸಿದ್ದರು. ಸುಮಾರು 420 ಕಿಮೀ ಅಂತರವನ್ನು ಈ ಮಹಿಳಾ ಅಭಿಮಾನಿ ರನ್ನಿಂಗ್ ಮೂಲಕವೇ ಕ್ರಮಿಸಿದ್ದಾರೆ. ಅಪ್ಪು ಮೇಲಿನ ಅಭಿಮಾನ, ಅಗಲಿಕೆಯ ನೋವಿನಿಂದ ವಿಶೇಷ ಗೌರವ ಸೂಚಿಸಲು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಪುನೀತ್ ಸಮಾಧಿಗೆ ವಿಶೇಷ ನಮನ ಸಲ್ಲಿಸಬೇಕು ಅನ್ನುವ ಇಚ್ಚೆಯಿಂದ ದ್ರಾಕ್ಷಾಯಿಣಿ ಸ್ವಗ್ರಾಮ ಮನಗುಂಡಿಯ ಬಸವೇಶ್ವರ ವೃತದಿಂದ ಬೆಂಗಳೂರು ಕಡೆಗೆ ಓಟವನ್ನು ಆರಂಭಿಸಿದ್ದರು. ಅಪ್ಪು ಮಹಿಳಾ ಅಭಿಮಾನಿಯ ಈ ನಿರ್ಧಾರಕ್ಕೆ ಗ್ರಾಮದ ಗುರುಹಿರಿಯರು ದ್ರಾಕ್ಷಾಯಿಣಿ ಹಾಗೂ ಅವರ ತಾಯಿ ಮಕ್ಕಳಿಗೆ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದ್ದರು. ಅಲ್ಲಿಂದ ಶುರುವಾದ ದ್ರಾಕ್ಷಾಯಿಣಿಯ ಓಟ ಅಪ್ಪು ಸಮಾಧಿವರೆಗೂ ಸಾಗಿ ಬಂದಿದೆ. ರಾಷ್ಟ್ರೀಯ ಹೆದ್ಸಾರಿ ಮಾರ್ಗವಾಗಿ ಹುಬ್ಬಳ್ಳಿ, ಶಿಗ್ಗಾಂವ, ಹಾವೇರಿ ತಲುಪಿ ಬಳಿಕ ಬೆಂಗಳೂರಿಗೆ ಆಗಮಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

