ಧಾರವಾಡ : ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದು ಆ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡುತ್ತಿತ್ತು .
ಬಂಧು , ಮಿತ್ರರು ಬಂದು ವಧು , ವರರಿಗೆ ಆಶೀರ್ವದಿಸುತ್ತಿದ್ದರು . ಆದರೆ , ವಿಧಿಯಾಟವೇ ಬೇರೆಯಾಗಿತ್ತು . ಹೀಗೆ ಮರಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿರುವ ಕ್ರೂಸರ್ ವಾಹನ , ಮದುವೆಯ ಸಂಭ್ರಮದಲ್ಲಿರಬೇಕಿದ್ದ ಮನೆ ಮುಂದೆ ನೀರವ ಮೌನ . ನಿನ್ನೆ ತಡರಾತ್ರಿ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿ ದಿಬ್ಬಣಕ್ಕೆಂದು ಬಂದವರು ಮಸಣ ಸೇರುವಂತಾಗಿದೆ . ಬೆನಕಣಕಟ್ಟಿ ಕ್ರಾಸ್‌ನಲ್ಲಿ ಮನೆ ಹೊಂದಿರುವ ನಿಗದಿ ಗ್ರಾಮದ ಕಲ್ಲಪ್ಪ ದಾಸನಕೊಪ್ಪ ಎಂಬುವವರ ಪುತ್ರ ಮಂಜುನಾಥ ಅವರ ವಿವಾಹ ಮನಸೂರು ಗ್ರಾಮದ ರೇವಣಸಿದ್ದೇಶ್ವರ ಮಠದಲ್ಲಿ ನಡೆಯುತ್ತಿತ್ತು . ನಿನ್ನೆ ರಾತ್ರಿ ನಿಶ್ಚಿತಾರ್ಥ ಕೂಡ ಇಟ್ಟುಕೊಳ್ಳಲಾಗಿತ್ತು . ಈ ನಿಶ್ಚಿತಾರ್ಥಕ್ಕೆ ಬಂಧು , ಮಿತ್ರರು ಕ್ರೂಸರ್ ವಾಹನದಲ್ಲಿ ಹೋಗಿ ನಿಶ್ಚಿತಾರ್ಥ ಮುಗಿಸಿಕೊಂಡು ಮರಳಿ ಬರುತ್ತಿದ್ದ ವೇಳೆ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ .

ಅನನ್ಯ , ಹರೀಶ , ಶಿಲ್ಪಾ , ನೀಲವ್ವ , ಮಧುಶ್ರೀ , ಮಹೇಶ್ವರಯ್ಯ , ಶಂಭುಲಿಂಗಯ್ಯ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು , ಇನ್ನುಳಿದ 9 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ . ಅಪಘಾತವಾದ ಸುದ್ದಿ ತಿಳಿದ ಕೂಡಲೇ ಮದುವೆ ಮಂಟಪವನ್ನು ಸಂಬಂಧಿಕರು ಖಾಲಿ ಮಾಡಿದ್ದಾರೆ .

ತಾಳಿ ಕಟ್ಟುವ ಶಾಸ್ತ್ರ ಕೂಡ ನಿನ್ನೆಯೇ ಮುಗಿದಿತ್ತು . ಹೀಗಾಗಿ ವಧು , ವರರ ಸಮೇತ ಸಂಬಂಧಿಕರು ಕಲ್ಯಾಣಮಂಟಪನ್ನು ಖಾಲಿ ಮಾಡಲಾಗಿದ್ದು , ಇಂದಿನ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

