ಬೆಂಗಳೂರು: ಎಸಿಬಿ ರದ್ದು ಮಾಡಿದಾಕ್ಷಣ ಲೋಕಾಯುಕ್ತ ಸಂಸ್ಥೆಯಿಂದಲೇ ಎಲ್ಲವೂ ಶುದ್ಧಿಯಾಗಬಹುದೆಂದು ನಾನು ಭಾವಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಎಸಿಬಿ ರದ್ದು ಮಾಡಿ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಿಲ್ಲಿಸುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ ಎಂದು ಅವರು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಯಾವ ದಾಖಲೆಗಳನ್ನು ಬೇಕಾದರೂ ನೀಡಬಲ್ಲೆ. ಆದರೆ ಏನು ಪ್ರಯೋಜನ? ಎಸಿಬಿಯ ಭ್ರಷ್ಟಾಚಾರದ ಪವರ್ ಪಾಯಿಂಟ್ ಆಗಿತ್ತು. ಭ್ರಷ್ಟಾಚಾರದ ತಡೆಯುವುದು ಅದರಿಂದ ಸಾಧ್ಯ ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಕುರಿ ಕಾಯುವುದಕ್ಕೆ ತೋಳ ಬಿಡುತ್ತಾರೆ ಎನ್ನುತ್ತಾರಲ್ಲ ಹಾಗೆ ಇದು. ಲೋಕಾಯುಕ್ತದಿಂದ ಶುದ್ಧ ಆಗುತ್ತದೆ ಎಂದು ಭಾವಿಸಿಲ್ಲ. ಮೊದಲು ವಿಧಾನಸೌಧದ ಮೂರನೇ ಮಹಡಿ ಶುದ್ಧವಾಗಬೇಕು ಎಂದು ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ಸರಕಾರದ ಕಾಲದಲ್ಲಿ ಎಸಿಬಿ ರಚನೆ ಮಾಡಲಾಗಿತ್ತು. ಆ ಸರಕಾರದ ವಿರುದ್ಧ ಬಂದಿದ್ದ ಅನೇಕ ಆರೋಪಗಳನ್ನು ಮೂಲೆಗುಂಪು ಮಾಡುವ ನಿಟ್ಟಿನಲ್ಲಿ ಎಸಿಬಿ ರಚನೆಯಾಗಿತ್ತು. ವಿಧಾನ ಮಂಡಲದಲ್ಲಿ ಕಾಯಿದೆ ತಂದು ಎಸಿಬಿಯನ್ನು ರಚನೆ ಮಾಡಿದ್ದಲ್ಲ ಅದು. ಆ ಸರಕಾರ ಮುಖಭಂಗದಿಂದ ಪಾರಾಗಲು ಎಸಿಬಿ ರಚನೆ ಮಾಡಿತ್ತು ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





