ಮೈಸೂರು: ಹಳೇ ದ್ವೇಷದಲ್ಲಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಇಲ್ಲಿನ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ ಕೊಲೆಯಾದಾತ. ನವೀನ್ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಲೆ ಆರೋಪಿಗಳಾದ ಚಂದ್ರು ಹಾಗೂ ಶೆಟ್ಟಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಸಂಪೂರ್ಣ ವಿವರ: ಕ್ಯಾತಮಾರನಹಳ್ಳಿಯ ಅಶ್ವತ್ಥಕಟ್ಟೆ ಬಳಿ ನವೀನ್ ಹಾಗೂ ವೆಂಕಟೇಶ್ ರಾತ್ರಿ ಮಾತನಾಡುತ್ತ ನಿಂತಿದ್ದಾಗ ಅಲ್ಲಿಗೆ ಬಂದ ಚಂದ್ರು ಹಾಗೂ ಶೆಟ್ಟಿ ಗಲಾಟೆ ಶುರು ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಶೆಟ್ಟಿ ಎಂಬಾತ ವೆಂಕಟೇಶ್ಗೆ ಚಾಕುವಿನಿಂದ ಇರಿದಿದ್ದಾನೆ. ವೆಂಕಟೇಶ್ ಸಹಾಯಕ್ಕೆ ಬಂದ ನವೀನ್ಗೂ ಚಾಕುವಿನಿಂದ ಇರಿಯಲಾಗಿದೆ.
ತೀವ್ರ ಗಾಯಗೊಂಡ ಇಬ್ಬರನ್ನೂ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಸಾವನ್ನಪ್ಪಿದ್ದಾನೆ. ನವೀನ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

