ವಿಧಾನಸಭೆ: ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಕೊಡುಗು ಜಿಲ್ಲೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ, ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.
ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಮಾತನಾಡುವಾಗ ಸ್ವತಃ ಸಿದ್ದರಾಮಯ್ಯನವರು ಈ ವಿಷಯ ಪ್ರಸ್ತಾಪಿಸಿದರು. ಆಗ ಕೆ.ಜಿ. ಬೋಪ್ಪಯ್ಯ ಹಾಗೂ ಅಪ್ಪಚ್ಚು ರಂಜನ್ ವಿರುದ್ಧ ನೇರ ಆರೋಪ ಮಾಡಿದ ಸಿದ್ದರಾಮಯ್ಯ ಘಟನೆಗೆ ಇವರಿಬ್ಬರೇ ನೇರ ಕಾರಣ. ಕೊಡಗಿನ ಜನ ಒಳ್ಳೆಯವರು. ಆದರೆ, ಈ ಇಬ್ಬರ ಕುಮ್ಮಕ್ಕಿನಿಂದ ಇವತ್ತು ಕೊಡಗು ಹಾಳಾಗಿದೆ. ಈ ಇಬ್ಬರಿಂದಲೇ ಕೊಡಗು ಅಭಿವೃದ್ಧಿ ನಾಶವಾಗಿದೆ, ಅಲ್ಲಿನ ಮಾರ್ಯಾದೆ ಹಾಳಾಗಿದೆ ಎಂದು ಆರೋಪಿಸಿದರು. ಅಲ್ಲದೇ ಕೊಡಗು ಏನೂ ಇವರಿಬ್ಬರ ಆಸ್ತಿನಾ? ಇವರೇನು ಅಲ್ಲಿನ ಪಾಳೆಗಾರರಾ? ಇಂತಹ ಷಡ್ಯಂತ್ರ, ಗೊಡ್ಡು ಬೆದರಿಕೆಗೆ ಹೆದರಲ್ಲ. ನಾಳೆಯೇ ಕೊಡಗಿಗೆ ಬರುತ್ತೇನೆ ಎಂದು ಸವಾಲು ಹಾಕಿದರು.
ಅದಕ್ಕೆ, ನಾವೇನು ಮಾಡಿಲ್ಲ. ನೀವು ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದು, ಟಿಪ್ಪು ಜಯಂತಿ ಆಚರಿಸಿದ್ದು ಎಂಬ ಕಾರಣಕ್ಕೆ ಅಲ್ಲಿನ ಜನ ಸಿಟ್ಟು ವ್ಯಕ್ತಪಡಿಸಿದರು. ನೀವು ಹಾಗೆಲ್ಲಾ ಪ್ರಚೋದನಾಕಾರಿಯಾಗಿ ಮಾತನಾಡಬಾರದಿತ್ತು ಎಂದು ಕೆ.ಜೆ. ಬೋಪಯ್ಯ ಹಾಗೂ ಅಪ್ಪಚ್ಚು ರಂಜರ್ ಹೇಳಿದರು. ನಿಮ್ಮಂತವಹರಿಂದಲೇ ಕೊಡಗು ಹಾಳಾಗಿದೆ. ಕೊಡಗಿನ ಜನ ಒಳ್ಳೆಯವರು. ಅವರನ್ನು ನೀವಿಬ್ಬರೇ ಎತ್ತಿಕಟ್ಟಿದ್ದು ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

