ಧಾರವಾಡ : ಕರುನಾಡ ರಾಜರತ್ನ ಫ್ಯಾನ್ಸ್ ಅಸೋಶಿಯೇಶನ್ ಮತ್ತು ಡಾ. ಮಯೂರ ಮೋರೆ ಅಭಿಮಾನಿಗಳ ವತಿಯಿಂದ ಕರ್ನಾಟಕ ರತ್ನ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್ ಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗೂ ಅಪ್ಪು ಅಭಿನಯದ ಕೊನೆಯ “ಗಂಧದ ಗುಡಿ” ಚಿತ್ರದ ಬಿಡುಗಡೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ನೇತ್ರದಾನ ಶಿಬಿರ ಹಾಗೂ ಅಪ್ಪು ಭಾವಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಕರುನಾಡ ರಾಜರತ್ನ ಫ್ಯಾನ್ಸ್ ಅಸೋಶಿಯೇಶನ್ ಮತ್ತು ಡಾ. ಮಯೂರ ಮೋರೆ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದೆ ಎಂದು ಡಾ.ಮಯೂರ ಮೋರೆ ಫೌಂಡೇಶನ್ ಅಧ್ಯಕ್ಷರು ಹಾಗೂ ಹು-ಧಾ ಮಹಾನಗರ ಪಾಲಿಕೆಯ ಸದಸ್ಯರು ಆದ ಡಾ.ಮಯೂರ ಮೋರೆ ಇಂದಿಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಹಾಗೂ ಕರ್ನಾಟಕ ರತ್ನ, ದಿವಂಗತ ನಟ ಡಾ. ಪುನೀತ್ ರಾಜಕುಮಾರ್ ಅವರ ಒಡನಾಟದ ಬಗ್ಗೆ ಹೇಳುವುದಕ್ಕೆ ಪದಗಳೇ ಸಾಲದು. ಉತ್ತರ ಕರ್ನಾಟಕದ ಜನರ ಅಪ್ಪು ಅವರು ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ಉತ್ತರ ಕರ್ನಾಟಕ ಭಾಗಕ್ಕೆ ಅಪ್ಪು ಅವರ ಕೊಡುಗೆಯೂ ಅಪಾರವಾಗಿದೆ. ಹೀಗಾಗಿ, ಅಪ್ಪುರ ನೆನೆಪು ಸದಾ ನಮ್ಮೊಂದಿಗೆ ಇರಬೇಕು ಅನ್ನೋದು ನಮ್ಮೆಲ್ಲರ ಬಯಕೆಯಾಗಿದೆ. ಹುಬ್ಬಳ್ಳಿ – ಧಾರವಾಡ ಅವಳಿ ನಗರದ ಪ್ರತಿಯೊಬ್ಬ ಅಪ್ಪು ಅಭಿಮಾನಿಯ ಆಸೆಯೂ ಇದಾಗಿದೆ.
ಪುನೀತ್ ರಾಜಕುಮಾರ್ ಅವರು ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಯುವ ಸಮುದಾಯಕ್ಕೆ ಮಾದರಿ ಕಾರ್ಯವನ್ನು ಮಾಡಿದ್ದಾರೆ. ಅವರ ಸ್ಪೂರ್ತಿಯಿಂದಾಗಿ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ನೇತ್ರದಾನ ಮಾಡುತ್ತಿದ್ದಾರೆ. ಅವರ ಈ ಕಾರ್ಯವು ನಮಗೆ ಮಾದರಿಯಾಗಿದೆ. ಹೀಗಾಗಿ, ಅಪ್ಪು ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಪ್ರಯುಕ್ತವಾಗಿ ಸಸಿ ವಿತರಣೆ, ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರದಾನ ಶಿಬಿರ ಕೂಡ ನಡೆಯಲಿದೆ ಎಂದರು.
ಅಪ್ಪು ಭಾವಚಿತ್ರಗಳ ಅದ್ಧೂರಿ ಮೆರವಣಿಗೆ
ಕರುನಾಡ ರಾಜರತ್ನ ಪವರ್ ಸ್ಟಾರ್ ದಿವಂಗತ ಶ್ರೀ ಡಾ. ಪುನೀತ್ ರಾಜ್‌ಕುಮಾರ್ ಅವರ ಅಭಿನಯದ ಕೊನೆಯ “ಗಂಧದ ಗುಡಿ” ಚಿತ್ರವು ಇದೇ ಅಕ್ಟೋಬರ್ 28 ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಗಂಧದ ಗುಡಿ ಚಿತ್ರ ಬಿಡುಗಡೆ ಪ್ರಯುಕ್ತವಾಗಿ ಕರುನಾಡ ರಾಜರತ್ನ ಫ್ಯಾನ್ಸ್ ಅಸೋಶಿಯೇಶನ್ ಮತ್ತು ಡಾ. ಮಯೂರ ಮೋರೆ ಅಭಿಮಾನಿಗಳ ವತಿಯಿಂದ ಚಿತ್ರವು ಯಶಸ್ವಿಯಾಗಿ ಶತದಿನ ಆಚರಿಸಲಿ ಹಾಗೂ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಲಿ ಎಂದು ಶುಭಕೋರುತ್ತಾ ಅಪ್ಪು ಭಾವಚಿತ್ರ ಮೆರವಣಿಗೆ ಆಯೋಜಿಸಲಾಗಿದೆ ಎಂದರು.
ಅಂದು ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಡಾ.ಮಯೂರ್ ಮೋರೆ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನಗರದ ಶಿವಾಜಿ ಸರ್ಕಲ್‌ನಿಂದ ಸಾಂಸ್ಕೃತಿಕ ಕಲಾತಂಡಗಳು, ಜಾನಪದ ನೃತ್ಯಗಳು ಈ ಮೆರೆವಣಿಗೆಯಲ್ಲಿ ಭಾಗವಹಿಸಲಿವೆ ಮೆರವಣಿಗೆ ಹೊರಟು ರೀಗಲ್ ಸರ್ಕಲ್, ಅಂಜುಮನ್ ಸಂಸ್ಥೆಯ ವೃತ್ತ, ವಿವೇಕಾನಂದ ವೃತ್ತದ ಮೂಲಕ ಹಾಯ್ದು ಪದ್ಮಾ ಚಿತ್ರ ಮಂದಿರ ತಲುಪಲಿದೆ. , ಬಳಿಕ ಅಪಾರ ಪ್ರಮಾಣದ ಅಭಿಮಾನಿಗಳಿಂದ ಪುನೀತ ರಾಜಕುಮಾರ ಅವರ ಕಟೌಟ್‌ಗೆ ಮಾಲಾರ್ಪಣೆ ಮಾಡಿ, ಸಿಹಿ ವಿತರಿಸಿ ಸಂಭ್ರಮಿಸಲಾಗುವುದು ಎಂದರು.
ಎಲ್ಲರ ಪ್ರೀತಿಯ ಅಪ್ಪು, ದಿವಂಗತ ಪವರ್ ಸ್ಟಾರ್ ಶ್ರೀ ಪುನೀತ್ ರಾಜಕುಮಾರ್ ಅವರು ತಮ್ಮಜೀವನದ ಉದ್ದಕ್ಕೂ ಯುವ ಸಮುದಾಯಕ್ಕೆ ಮಾದರಿಯಾಗುವ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರ ಸವಿ ನೆನಪನ್ನು ಹಚ್ಚ ಹಸಿರಾಗಿ ಇಡುವುದು ನಮ್ಮೆಲ್ಲರ ಕೆಲಸವಾಗಿದೆ. ಇದರ ಭಾಗವಾಗಿ ಡಾ.ಮಯೂರ್ ಮೊರೆ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಹುಬ್ಬಳ್ಳಿ – ಧಾರವಾಡ ಅವಳಿ ನಗರದ ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳು, ಡಾ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು, ಕನ್ನಡ ಅಭಿಮಾನಿಗಳು ಹಾಗೂ ಎಲ್ಲಾ ನಾಗರಿಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ಸದಸ್ಯರಾದ ಶಂಭು ಸಾಲಿಮನಿ, ಗಣೇಶ ಮುಧೋಳ ಇನ್ನಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

