ಬೆಂಗಳೂರು: ಹೃದಯಾಘಾತದಿಂದ ಇನ್ಸ್‌ಪೆಕ್ಟರ್ ನಂದೀಶ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಚಿವರು ಹಾಗೂ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ 6 ಜನರ ವಿರುದ್ಧ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಂ ಎಂಬುವವರು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಬೈರತಿ ಬಸವರಾಜು, ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ ಅವರ ವಿರುದ್ಧ ದೂರು ನೀಡಿದ್ದಾರೆ
ಬೈರತಿ ಬಸವರಾಜ್ ಅವರ ಸಂಬಂಧಿಗಳ ಕಿರುಕುಳವೇ ನಂದೀಶ್ ಹೃದಯಾಘಾತಕ್ಕೆ ಕಾರಣ. ಬೈರತಿ ಬಸವರಾಜ್ರ ಸಂಬಂಧಿಗಳಾದ ಚಂದ್ರು ಹಾಗೂ ಗಣೇಶ್ ಅವರು ಹೇಳಿದಂತೆ ಕೇಳಲಿಲ್ಲ ಎಂದು ನಂದೀಶ್ರನ್ನು ಟಾರ್ಗೆಟ್ ಮಾಡಿದ್ದರು.
ಉದ್ದೇಶಪೂರ್ವಕವಾಗಿ ಸಿಸಿಬಿಗೆ ಮಾಹಿತಿ ನೀಡಿ ದಾಳಿ ಮಾಡಿಸಿದ್ದರು. ನಂದೀಶ್ರನ್ನು ಕೆಸಲದಿಂದ ಅಮಾನತು ಮಾಡುವಂತೆ ಒತ್ತಡ ಹಾಕಿದ್ದರು. ಅಲ್ಲದೆ ಪೋಸ್ಟಿಂಗ್ಗಾಗಿ ಬೈರತಿ ಬಸವರಾಜ್ಗೆ 50 ಲಕ್ಷ ರೂ. ಹಾಗೂ ಗೃಹ ಸಚಿವರಿಗೆ 20 ಲಕ್ಷ ರೂ. ನೀಡಲಾಗಿದೆ. ಸಸ್ಪೆಂಡ್ ಮಾಡುವ ಮೊದಲು ನಂದೀಶ್ ಕಡೆಯಿಂದ ಮಾಹಿತಿ ಕೇಳಿಲ್ಲ. ನ್ಯಾಚರಲ್ ಜಸ್ಟೀಸ್ ಇಲ್ಲದೇ ನಂದೀಶ್ ಅವರನ್ನ ಅಮಾನತು ಮಾಡಲಾಗಿತ್ತು. ಇದೆಲ್ಲವೂ ನಂದೀಶ್ರ ಸಾವಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಇಲ್ಲವಾದಲ್ಲಿ ನಾನು ಕೋರ್ಟ್ಗೆ ಹೋಗುವೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಂ ಎಚ್ಚರಿಸಿದ್ದಾರೆ.
ಹುಣಸೂರು ಮೂಲದ ನಂದೀಶ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪಬ್ವೊಂದಕ್ಕೆ ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಕೆಲಸದಿಂದ ಇತ್ತೀಚಿಗೆ ನಂದೀಶ್ ಅವರನ್ನು ಅಮಾನತು ಮಾಡಲಾಗಿತ್ತು. ಇದರಿಂದ ತೀವ್ರ ನೊಂದಿದ್ದ ನಂದೀಶ್, ಅ.27ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.
ನಂದೀಶ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ವಿರುದ್ಧ ಬೆಂಗಳೂರು ನಿವಾಸಿ ಜಾನ್ ಪಾಲ್ ಎಂಬುವವರೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ರಾಜಕೀಯ ಒತ್ತಡ ಮತ್ತು ದ್ವೇಷವೇ ಇನ್ಸ್‌ಪೆಕ್ಟರ್ ಅಮಾನತಿಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

