ರಾಯಚೂರು: ‘ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಪಡೆದು, ಪೀಠಾಧಿಪತಿ ಸ್ವಾಮೀಜಿಯನ್ನು ಭೇಟಿ ಮಾಡಿದೆ. ನಮ್ಮ ಪರಿವಾರಕ್ಕೆ ಮಂತ್ರಾಲಯ ಮಠವು ತವರೂರು ಇದ್ದಂತೆ. ಇಂಥ ಭಾಗ್ಯ ಎಲ್ಲರಿಗೂ ಸಿಗೋದಿಲ್ಲ’ ಎಂದು ಚಲನಚಿತ್ರ ನಟ ಶಿವರಾಜಕುಮಾರ್ ಹೇಳಿದರು.
ಗೀತಾ ಪ್ರೋಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ತಮ್ಮ ಮೊದಲ ಚಲನಚಿತ್ರ ‘ವೇದ’ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಯಚೂರಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಇದೇ ಮೊದಲು. ಆದರೆ ಮಂತ್ರಾಲಯ ಹಾಗೂ ಬೇರೆ ಜಿಲ್ಲೆಗಳಿಗೆ ತೆರಳುವ ಮಾರ್ಗದಲ್ಲಿ ರಾಯಚೂರಿಗೆ ಸಾಕಷ್ಟು ಸಲ ಬಂದಿದ್ದೇನೆ. ಅಭಿಮಾನಿಗಳೊಂದಿಗೆ ಮಾತನಾಡಿದ್ದೇನೆ’ ಎಂದರು.
‘ವೇದ ಎಂದರೆ ಪ್ರಾಚೀನ ನಾಲ್ಕು ವೇದಗಳಲ್ಲ. ಮನುಷ್ಯನ ಜೀವನದಲ್ಲಿಯೂ ಪ್ರೀತಿ, ಬಾಳು, ನಂಬಿಕೆ ಹಾಗೂ ಕೋಪಗಳು ಬಂದು ಹೋಗುತ್ತವೆ. ಈ ನಾಲ್ಕು ಅಂಶಗಳನ್ನು ಒಳಗೊಂಡ ಒಂದು ಪಾತ್ರ ಇದರಲ್ಲಿದೆ. ನನ್ನ 125ನೇ ಚಲನಚಿತ್ರವಾಗಿದ್ದು, ಎಲ್ಲರೂ ಬೆಂಬಲಿಸಬೇಕು’ ಎಂದು ಕೋರಿದರು. ‘ಅಪ್ಪಾಜಿ ಅವರು ಈ ಭಾಗಕ್ಕೆ ಅನೇಕ ಸಲ ಭೇಟಿ ನೀಡಿರುವುದು ನೆನಪಿದೆ. ಕಲ್ಯಾಣ ಕರ್ನಾಟಕ ಭಾಗದ ಬರಹಗಾರರು, ನಿರ್ದೇಶಕರಿಗೆ ನನ್ನ ಚಿತ್ರಗಳಲ್ಲಿ ಅನೇಕರಿಗೆ ಅವಕಾಶ ನೀಡಲಾಗಿದೆ. ಅದು ಹಾಗೇ ಮುಂದುವರಿಯಲಿದೆ’ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

