ಆತ ಹುಬ್ಬಳ್ಳಿಯ ದೊಡ್ಡ ಉದ್ಯಮಿ. ಇತ್ತೀಚೆಗೆ ತನ್ನಮಗ ನಾಪತ್ತೆ ಆಗಿದ್ದಾನೆಂದು ದೂರು ನೀಡಿದ್ದ. ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ಫೀಲ್ಡ್‌ಗೆ ಇಳಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ತಂದೆಯೇ ಮಗನ ಹತ್ಯೆಗೆ ಸುಪಾರಿ ಕೊಟ್ಟಿರುವ ವಿಷಯ ಕೇಳಿ ಶಾಕ್ ಆಗಿದ್ದಾರೆ.

ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಭರತ್ ಜೈನ್ ಅವರ ಪುತ್ರ ಮಿಸ್ಸಿಂಗ್ ಆಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಮಗನನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಉದ್ಯಮಿ ಭರತ್‌ನನ್ನು ವಶಕ್ಕೆ ಪಡೆದಿರುವ ಕೇಶ್ವಾಪುರ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಉದ್ಯಮಿ ಭರತ್ ಜೈನ್ ಪುತ್ರ ಅಖಿಲ್ ಜೈನ್ ಕಳೆದ

ಡಿಸೆಂಬರ್ 1 ರಿಂದ ನಾಪತ್ತೆಯಾಗಿದ್ದಾನೆಂದು ಕುಟುಂಬಸ್ಥರು ಕೇಶ್ವಾಪುರ ಪೊಲೀಸರಿಗೆ ದೂರು ನೀಡಿದ್ದರು. ಅಖಿಲ್ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಹಲವು ಅಚ್ಚರಿಯ ವಿಚಾರಗಳು ಗೊತ್ತಾಗಿದ್ದವು. ದುಷ್ಚಟಗಳ ದಾಸನಾಗಿದ್ದ ಅಖಿಲ್ ಬಗ್ಗೆ ಮನೆಯವರೇ ರೋಸಿ ಹೋಗಿದ್ದರು ಅನ್ನೋ ವಿಷಯ ಪೊಲೀಸರಿಗೆ ತಿಳಿದಿದೆ..

ಅಖಿಲ್ ಸೇರಿದಂತೆ ಕುಟುಂಬಸ್ಥರ ಫೋನ್ ಕರೆಗಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಇನ್ನಷ್ಟು ಬೆಚ್ಚಿ ಬೀಳಿಸುವ ಮಾಹಿತಿಗಳು ಸಿಕ್ಕಿವೆ. ಅಖಿಲ್ ತಂದೆ ಭರತ್ ಕೆಲವು ಕುಖ್ಯಾತ ರೌಡಿಗಳ ಸಂಪರ್ಕದಲ್ಲಿ ಇದ್ದದ್ದು ಗೊತ್ತಾಗಿದೆ. ಅಖಿಲ್ ನಾಪತ್ತೆಗೆ ಮೊದಲು ಭರತ್ ಸಂಪರ್ಕದಲ್ಲಿದ್ದ ರೌಡಿಗಳು ಕುಖ್ಯಾತ ಸುಪಾರಿ ಹಂತಕರು ಎಂಬುದು ತಿಳಿದುಬಂದಿದೆ. ಹೀಗಾಗಿ ಉದ್ಯಮಿ ಭರತ್‌ನನ್ನು ಕರೆಸಿ ವಿಚಾರಣೆ ಮಾಡಿದಾಗ ಆಘಾತಕಾರಿ ವಿಷಯ ಬಾಯ್ಬಿಟ್ಟಿದ್ದಾನೆ. ಮಗನನ್ನು ತಾನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಭರತ್ ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗುತ್ತಿದೆ..

ಆದ್ರೆ ಈ ಕುರಿತು ಪೊಲೀಸರು ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ. ಯಾಕಂದ್ರೆ ಪೊಲೀಸರಿಗೆ ಅಖಿಲ್ ಮೃತದೇಹ ಇನ್ನೂ ಸಿಕ್ಕಿಲ್ಲ. ಹೀಗಾಗಿ ದೇವರ ಗುಡಿಹಾಳದಲ್ಲಿರುವ ಭರತ್ ಫಾರ್ಮ್‌ಹೌಸ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಅಖಿಲ್ ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸುಪಾರಿ ಹಂತಕರು ಕೊಲೆ ಮಾಡಿ ಮೃತದೇಹವನ್ನು ಎಲ್ಲಿ ಎಸೆದಿದ್ದಾರೆ ಅನ್ನೋದರ ತನಿಖೆಯನ್ನು ಕೇಶ್ವಾಪುರ ಠಾಣೆ ಪೊಲೀಸರು ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ಸುಪಾರಿ ಹಂತಕರ ಬಂಧನಕ್ಕೂ ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

