ಬೆಳಗಾವಿ: ಉಪ ಕುಲಪತಿ ಹುದ್ದೆ 5 ಕೋಟಿಗೆ ಮಾರಾಟ ಆಗುತ್ತಿದೆ ಎಂದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉಪಕುಲಪತಿ ಹುದ್ದೆಗೆ ಲಂಚ ನೀಡಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರು ಬಹಳ ಅನುಭವ ಹೊಂದಿರುವ ವಿದ್ಯಾವಂತರು.ಉಪಕುಲಪತಿಗಳ ಹುದ್ದೆಗೆ 5 ಕೋಟಿ ರು. ನೀಡಬೇಕು ಎಂದು ಈ ಸಂಸದರು ಹೇಳಿದ್ದಾರೆ.
ಇಡಿ, ಐಟಿ, ಸಿಬಿಐ, ಲೋಕಾಯುಕ್ತ ಸಂಸ್ಥೆಗಳು ಏನು ಮಾಡುತ್ತಿವೆ. ಈ ಸಂದರ್ಭದಲ್ಲಿ ರಾಜ್ಯಪಾಲರು ಹಾಗೂ ಅವರ ಕಚೇರಿ ಮೇಲೆ ಆರೋಪ ಮಾಡಲು ಆಗುವುದಿಲ್ಲ. ಅದು ಸರಿಯಲ್ಲ. ಉಪಕುಲಪತಿಗಳ ಹೆಸರನ್ನು ಸರ್ಕಾರ ಶಿಫಾರಸ್ಸು ಮಾಡಿದರೆ ರಾಜ್ಯಪಾಲರು ನೇಮಕ ಮಾಡುತ್ತಾರೆ.
ಸರ್ಕಾರದಲ್ಲಿ ಯಾರಿಗೆ ಈ ಹಣ ತಲುಪಿದೆ? ಮಂತ್ರಿಗಳಿಗೆ ತಲುಪಿದೆಯೋ? ಅಧಿಕಾರಿಗಳಿಗೆ ತಲುಪಿದೆಯೋ? ಎಂಬುದು ಚರ್ಚೆ ಆಗಬೇಕು. ಅದಕ್ಕಾಗಿ ವಿಧಾನ ಪರಿಷತ್ ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಾಗಿದೆ. ಕೂಡಲೇ ಲೋಕಾಯುಕ್ತ, ಇಡಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ನಮ್ಮ ಮೇಲೆ ದಾಳಿ ಮಾಡಿ ತನಿಖೆ ಮಾಡುವವರು ಇವರ ಹೇಳಿಕೆ ವಿಚಾರದಲ್ಲೂ ತನಿಖೆ ಮಾಡಬೇಕು. ಸಿಬಿಐನವರು ನನ್ನ ಜತೆ ವ್ಯವಹಾರ ಇಟ್ಟುಕೊಂಡವರಿಗೆಲ್ಲ ನೊಟೀಸ್ ನೀಡಿ ವಿಚಾರಣೆ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಚರ್ಚೆ ಆಗಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

