ಮೈಸೂರು: ಇನ್ನು ಮೂರು ತಿಂಗಳ ಅವಧಿಯೊಳಗೆ ದೇಶದಲ್ಲಿ ಮತ್ತೆ ಕೊರೊನಾ ಉಲ್ಬಣವಾಗುವ ಸಾಧ್ಯತೆ ಇದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ತಾಲೂಕಿನ ಸುತ್ತೂರಿನಲ್ಲಿ ನಡೆದ ಶ್ರೀ ಆದಿಜಗದ್ಗುರು ಶಿವರಾತ್ರಿ ಶಿವಯೋಗಿಗಳವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಚೀನಾ, ಆಸ್ಟ್ರೇಲಿಯಾ, ಬ್ರೆಜಿಲ್ ಹಾಗೂ ಅಮೆರಿಕ ಇನ್ನಿತರ ದೇಶಗಳಲ್ಲಿ ಕೊರೊನಾ ರೋಗ ಹರಡುವಿಕೆ ಉಲ್ಬಣಗೊಂಡಿದ್ದು, ಮುಂಬರುವ ದಿನಗಳಲ್ಲಿ ನಮ್ಮಲ್ಲೂ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಜನರು ಈಗಿನಿಂದಲೇ ಎಚ್ಚರಿಕೆ ವಹಿಸುವ ಜೊತೆಗೆ ಕೊರೊನಾ ಮೂರನೇ ಡೋಸ್ ತೆಗೆದುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸದ್ಯ ಮಾಸ್ಕ್ ನಮ್ಮ ಬಾಳಿನ ಸಂಗಾತಿ ಎಂಬ ಅರಿವು ಅವಶ್ಯಕ. ಚೀನಾದಲ್ಲಿ ಲಸಿಕೆ ನೀಡಿಕೆ ಪರಿಣಾಮಕಾರಿಯಾಗಿಲ್ಲ. ಆದರೆ, ನಮ್ಮ ದೇಶದಲ್ಲಿ ಶೇ.95 ಪ್ರಮಾಣದಲ್ಲಿ ಒಂದು ಮತ್ತು ಎರಡನೇ ಕೊರೊನಾ ಲಸಿಕೆ ನೀಡಲಾಗಿದೆ. ಮೂರನೇ ಡೋಸ್ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮುಂಬರುವ ದಿನಗಳಲ್ಲಿ ಕ್ರಿಸ್‌ಮಸ್ ಹಾಗೂ ಹೊಸವರ್ಷ ಎದುರಾಗುವುದರಿಂದ ಜನರು ಗುಂಪುಗುಂಪಾಗಿ ಸೇರಲಿದ್ದಾರೆ. ಈ ಸಂದರ್ಭ ಆರೋಗ್ಯದ ದೃಷ್ಟಿಯಿಂದ ಕೊರೊನಾ ಮಾರ್ಗಸೂಚಿ ಪಾಲನೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

