ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಹುಬೇಡಿಕೆಯ ನೀರಾವರಿ ಯೋಜನೆಗೆ ಕೇಂದ್ರ ಅಸ್ತು ಅಂದಿದೆ. ಕೇಂದ್ರ ಜಲ ಆಯೋಗವು ಕರ್ನಾಟಕದ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿಗೆ ಅನುಮತಿಯನ್ನು ನೀಡಿದೆ. ಈ ಮಾಹಿತಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಂಚಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ, ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಹಾಗೂ ಕೇಂದ್ರ ಜಲ ಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಜೋಶಿ ಅನಂತ ಧನ್ಯವಾದಗಳು ತಿಳಿಸಿದ್ದಾರೆ.
ಕಳಸಾ ಬಂಡೂರಿ ಯೋಜನೆಗೆ ಈ ಹಿಂದೆ ನಾವು ಕೂಡಾ ಹೋರಾಟ ಮಾಡಿದ್ವಿ. ಇದೀಗ ವಿಸ್ತೃತ ಯೋಜನಾ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದಿರುವ ಜೋಶಿ, ಬೊಮ್ಮಾಯಿ ಸರ್ಕಾರವೂ ಅತ್ಯಂತ ಶ್ರಮ ಹಾಕಿದೆ. ನಾನು ಬೊಮ್ಮಾಯಿ, ಗೋವಿಂದ್ ಕಾರಜೋಳ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇದರೊಂದಿಗೆ ರಾಜ್ಯ ಸರ್ಕಾರ ಕಳುಹಿಸಿದ್ದ ಡಿಪಿಆರ್‌ಗೆ ಜಲ ಆಯೋಗದ ಅನುಮತಿ ಸಿಕ್ಕಿದ್ದು, ಧಾರವಾಡ, ಬೆಳಗಾವಿ, ಗದಗ ಸೇರಿ ಹಲವು ಜಿಲ್ಲೆಗಳಿಗೆ ಇದು ಗುಡ್ ನ್ಯೂಸ್ ಆಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರನ್ನ ಭೇಟಿಯಾಗಿದ್ದರು. ಕರ್ನಾಟಕ ಕಾಂಗ್ರೆಸ್ ಜನವರಿ 2 ರಂದು ಮಹದಾಯಿ ವಿಚಾರವಾಗಿ ಬೃಹತ್ ಸಮಾವೇಶ ಮಾಡಲು ಸಿದ್ಧತೆ ನಡೆಸಿತ್ತು. ಇದೀಗ, ಕಾಂಗ್ರೆಸ್ ಸಮಾವೇಶಕ್ಕೂ ಮುನ್ನವೇ ಯೋಜನೆ ವರದಿಗೆ ಅನುಮೋದನೆ ದೊರೆತಂತಾಗಿದೆ. ಈ ಮೂಲಕ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಟಾಂಗ್ ನೀಡಿದೆ. ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದರು.