ಧಾರವಾಡ: ಕೇಂದ್ರ ಸರಕಾರದ ನಿರಂಕುಶ ಪ್ರಭುತ್ವ ರಾಜ್ಯ ಸರಕಾರಗಳ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತಿದೆ ಎಂದು ಹಿರಿಯ ನ್ಯಾಯವಾದಿ ಪಿ.ಎಚ್. ನೀರಲಕೇರಿ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ರಾಚಪ್ಪ ಹಡಪದ ದತ್ತಿ ಕಾರ್ಯಕ್ರಮದಲ್ಲಿ “ಒಕ್ಕೂಟ ವ್ಯವಸ್ಥೆಯಲ್ಲಿ ರಾಜಕೀಯ ಸ್ಥಿತಿಗತಿ ಅಂದು-ಇಂದು’ ವಿಷಯ ಕುರಿತು ಮಾತನಾಡಿದರು. ರಾಜಕೀಯ ನಾಯಕರ ಮೇಲಾಟದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಒಕ್ಕೂಟ ವ್ಯವಸ್ಥೆಯ ಉದ್ದೇಶವೇ ಕಳೆದು ಹೋಗುತ್ತಿದೆ ಎಂದು ಅಭಿಪ್ರಾಯಪಟ್ಟರು.
“ಒಂದು ದೇಶ ಒಂದು ಭಾಷೆ’ ಅನುಷ್ಠಾನ ಮಾಡಲು ಯೋಜಿಸಲಾಗಿದೆ. ಒತ್ತಾಯಪೂರ್ವಕವಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ನಾವೆಲ್ಲ ಕನ್ನಡಿಗರು ಧ್ವನಿ ಎತ್ತಬೇಕಿದೆ. ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಉತ್ತರದ ರಾಜ್ಯಗಳಲ್ಲಿ ಹಿಂದಿ ಭಾಷಿಕರ ಸಂಖ್ಯೆ ಹೆಚ್ಚಾಗಿದ್ದು, ಲೋಕಸಭೆಯಲ್ಲಿ ಉತ್ತರ ಭಾರತದ ಹಿಂದಿ ಭಾಷಿಕ ಸಂಸದರ ಸಂಖ್ಯೆ ಹೆಚ್ಚಾದರೆ ಹೆಚ್ಚು ಪ್ರಾತಿನಿಧಿತ್ವ ಅವರಿಗೆ ಸಿಗಲಿದೆ. ಇದರಿಂದ ಹಿಂದಿ ಹೇರಿಕೆ ಇನ್ನಷ್ಟು ವ್ಯಾಪಕವಾಗಿ ನಡೆಯುವ ಸಾಧ್ಯತೆಯಿದೆ. ಒಂದು ದೇಶ, ಒಂದು ಕಾನೂನು, ಒಂದು ಚುನಾವಣೆ ಎಂದು ಹೇಳುವ ಕೇಂದ್ರ ಸರಕಾರ ಇಡೀ ದೇಶಕ್ಕೆ ಒಂದೇ ಭಾಷೆ ಎಂದು ಹೇಳಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದರು.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ತಮ್ಮದೇ ಆದ ಹಕ್ಕುಗಳಿವೆ. ಆದರೆ ಕೇಂದ್ರ ಸರಕಾರ ರಾಜ್ಯಗಳ ಹಕ್ಕುಗಳನ್ನು ದಮನ ಮಾಡುತ್ತಿದೆ. ರಾಜ್ಯಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಏಕಾಏಕಿ ಕಾನೂನು ಹೇರಿಕೆ ರಾಜ್ಯಗಳ ಅಸ್ತಿತ್ವಕ್ಕೆ ಧಕ್ಕೆ ಮಾಡಲಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಭಾಷೆ, ಪ್ರಾಂತ, ಸಂಸ್ಕೃತಿ ಕ್ರೂಢಿಕರಣಕ್ಕೆ ಆದ್ಯತೆ ಇದ್ದು, ಇದನ್ನು ಉಳಿಸಿಕೊಳ್ಳುವುದು ಅವಶ್ಯ. ಒಕ್ಕೂಟ ವ್ಯವಸ್ಥೆ ಉಳಿಯಲು ಜನರ ಹಕ್ಕು ಪ್ರಶ್ನಿಸಬೇಕು ಎಂದು ತಿಳಿಸಿದರು.
ಕೃಷಿ ಕಾಯ್ದೆ ತಿದ್ದುಪಡಿ, ಆಹಾರ ಭದ್ರತೆ ಕಾನೂನು, ಚುನಾವಣಾ ಆಯೋಗದಲ್ಲಿ ಹಸ್ತಕ್ಷೇಪ, ಹಣಕಾಸು ಆಯೋಗದಲ್ಲಿ ಹಸ್ತಕ್ಷೇಪವನ್ನು ವಿರೋಧಿಸಬೇಕು. ಆದರೆ ಇದರ ಬಗ್ಗೆ ಗಂಭೀರ ಚಿಂತನೆ ನಡೆಸದ ಜನಪ್ರತಿನಿಧಿಗಳು ಮತ ರಾಜಕಾರಣದಲ್ಲಿ ನಿರತರಾಗಿರುವುದು ದುರ್ದೈವದ ಸಂಗತಿ. ಒಕ್ಕೂಟದ ವ್ಯವಸ್ಥೆಯೇ ಪ್ರಗತಿಗೆ ಪೂರಕ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕದ ಮಾಜಿ ಸಂಪಾದಕ ಮನೋಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ವಡ್ಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಮತಿ ಸಣಕಲ್ ಪ್ರಾರ್ಥಿಸಿದರು. ಶಂಕರ ಕುಂಬಿ ಸ್ವಾಗತಿಸಿದರು. ಗುರು ಹಿರೇಮಠ ನಿರೂಪಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





