ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಜುಲೈ 20 ರ ರಾತ್ರಿಯಿಂದ ಜುಲೈ 22 ರ ಬೆಳಿಗ್ಗೆ 8 ಗಂಟೆಯವರೆಗೆ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿನ ಸುಮಾರು 30 ಮನೆಗಳಿಗೆ ಹಾನಿ ಆಗಿದ್ದು, ಗೊಡೆ ಕುಸಿದು 5 ಕುರಿಮರಿಗಳ ಜೀವ ಹಾನಿ ಆಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ನಿರಂತರ ಮಳೆಯಿಂದಾಗಿ ಧಾರವಾಡ ತಾಲೂಕಿನಲ್ಲಿ ೨೫ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 3, ಅಳ್ನಾವರ ತಾಲೂಕಿನಲ್ಲಿ 3, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 1 ತೀವ್ರತರ ಮತ್ತು 1 ಭಾಗಶಃ ಸೇರಿ ಒಟ್ಟು 2, ಕುಂದಗೋಳ ತಾಲೂಕಿನಲ್ಲಿ 2 ಮತ್ತು ಕಲಘಟಗಿ ತಾಲೂಕಿನಲ್ಲಿ 2 ತೀವ್ರತರ ಹಾಗೂ 5 ಭಾಗಶಃ ಸೇರಿದಂತೆ ಒಟ್ಟು 7 ಮನೆಗಳು ಒಳಗೊಂಡಂತೆ ಜಿಲ್ಲೆಯ ಆರು ತಾಲೂಕುಗಳಲ್ಲಿ 30 ಮನೆಗಳು ಭಾಗಶಃ ಹಾನಿಯಾದ ವರದಿ ಆಗಿದೆ.
ನಿನ್ನೆ ರಾತ್ರಿ ನಿರಂತರ ಮಳೆ ಆಗಿದ್ದರಿಂದ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದ ಶಿವನಗೌಡ ಹೊಳೆಪ್ಪಗೌಡ ಪಾಟೀಲ ಇವರ ಮನೆ ಗೋಡೆ ಕುಸಿದು, ಅವರ 5 ಕುರಿ ಮರಿಗಳ ಜೀವ ಹಾನಿ ಆಗಿದೆ.
ಈ ಎಲ್ಲ ಪ್ರಕರಣಗಳ ಕುರಿತು ಗ್ರಾಮ ಅಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ತಹಸಿಲ್ದಾರರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ತನಿಖಾ ತಂಡದಿಂದ ಪರಿಶೀಲನೆ ಕಾರ್ಯ ಜರುಗಿಸಿ, ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ನಿಯಮಾವಳಿಗಳಂತೆ ನಿಯಮಾನುಸಾರ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





