ಧಾರವಾಡ : ಜಿಲ್ಲೆಯಲ್ಲಿ ಹಲವು ಕಡೆ ಅತಿಯಾದ ಮಳೆ, ಮುಂಗಾರು ಬಿತ್ತನೆ ಇಲ್ಲದೆ ಜನ ತೊಂದರೆಯಲ್ಲಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೇ ಹಳ್ಳಿಗಳಿಗೆ ಹೋಗಿ ಸಾರ್ವಜನಿಕರ ಸಮಸ್ಯೆಗಳನ್ನು ಕೇಳಬೇಕು. ಮತ್ತು ಅವರಿಗೆ ಅಗತ್ಯವಿರುವ ಸರಕಾರದ ನೆರವು, ಸಹಾಯ ಮಾಡಬೇಕೇಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಪ್ರಕೃತಿ ವಿಕೋಪಕ್ಕೆ ಸಂಭಂದಿಸಿದ ವಿಷಯಗಳ ಕುರಿತು ಜಿಲ್ಲಾ ಮಟ್ಟದ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದ ಲಾಡ್, ಜಿಲ್ಲೆಯಲ್ಲಿ ಮುಂಗಾರು ಮಳೆ ಅಭಾವದಿಂದ ಮುಂಗಾರು ಬಿತ್ತನೆಗೆ ಹಿನ್ನಡೆ ಆಗಿದೆ. ಬಿತ್ತಿದ ಕೆಲವು ರೈತರ ಬೆಳೆ ಸಕಾಲಕ್ಕೆ ಮಳೆ ಇಲ್ಲದೆ ಹಾಗೂ ಈಗ ಅತಿ ಮಳೆಯಿಂದಾಗಿ ಬೆಳೆ ಕುಂಠಿತವಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಪ್ರತಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ರೈತರಲ್ಲಿ ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಬೇಕು. ಬಿತ್ತಿದ ಬೆಳೆ ನಿರ್ವಹಣೆ, ಹಿಂಗಾರಿ ಬಿತ್ತನೆಗೆ ಅಗತ್ಯವಿರುವ ಕೃಷಿ ಸಲಹೆ ನೀಡಿ, ರೈತರಿಗೆ ನೆರವಾಗಬೇಕು. ರಾಜ್ಯ ಸರಕಾರದ ಯೋಜನೆ, ಸಬ್ಸಿಡಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮಹಾನಗರ ಪೊಲೀಸ್ ಆಯುಕ್ತ ಸಂತೋಷ ಬಾಬು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





