ಬೆಳ್ತಂಗಡಿ(ದಕ್ಷಿಣ ಕನ್ನಡ): ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನಡೆದಿದೆ. ಬೆಂಗಳೂರಿನ ನಿವಾಸಿಯ ವಿದ್ಯಾರ್ಥಿನಿಯೊಬ್ಬಳು ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದಳು. ಕಳೆದ ವಾರ ಕಾಲೇಜು ಕೊನೆಗೊಂಡಿದ್ದು, ಆ.02ರಂದು ರಾತ್ರಿ ತನ್ನ ಊರಾದ ಬೆಂಗಳೂರಿಗೆ ತೆರಳಲು ಉಜಿರೆಯಿಂದ ಪರಿಚಯಸ್ಥ ಆಟೋ ಚಾಲಕನಿಗೆ ಕರೆ ಮಾಡಿದ್ದಳು.
ಆತ ಬಂದು ಉಜಿರೆಯಿಂದ ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ರಾತ್ರಿ ಸುಮಾರು 9 ಗಂಟೆಗೆ ಅವಳನ್ನು ಡ್ರಾಪ್ ಮಾಡಿ ಹಿಂದಿರುಗುವಾಗ ಅಪರಿಚಿತ ಯುವಕರ ತಂಡವೊಂದು ಪ್ರಶ್ನಿಸಿ, ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ. ಆಟೋ ಚಾಲಕನನ್ನು ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಎಂದು ಗುರುತಿಸಲಾಗಿದೆ.
ಚಾಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಧರ್ಮಸ್ಥಳ ಸುತ್ತಮುತ್ತಲಿನ ಸಿಸಿಕ್ಯಾಮರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





