ರಾಯಚೂರು: ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಲ್ಲೇಶ್(16) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಎಸ್ಆರ್ಪಿಎಸ್ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲ್ಲೇಶ್ ಎಂದಿನಂತೆ ಕಾಲೇಜಿಗೆ ತೆರಳಲು ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ. ಈ ವೇಳೆ ಇಡಪನೂರು ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಗುದ್ದಿದೆ ಎಂದು ತಿಳಿದುಬಂದಿದೆ.
ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮಾರ್ಗಮಧ್ಯೆ ಮಲ್ಲೇಶ್ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಿಮ್ಸ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಮನೆಯ ಹಿರಿಮಗನಾಗಿದ್ದ ಮಲ್ಲೇಶ್ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಪರಿಹಾರ ಒದಗಿಸುವ ಮೂಲಕ ನ್ಯಾಯ ದೊರಕಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾ.ಪಂ. ಮಾಜಿ ಸದಸ್ಯ ರಾಮಚಂದ್ರ ಎಂಬವರು ಮಾತನಾಡಿ, ತುಂಗಭದ್ರಾ ನದಿಯಲ್ಲಿ ಹೇರಳವಾಗಿ ಮರಳು ದೊರೆಯುತ್ತಿದೆ. ಹಾಗಾಗಿ ರಾತ್ರಿ-ಹಗಲು ಎನ್ನದೇ ಅಕ್ರಮ ಮರಳು ಸಾಗಾಟ ಮಾಡಲಾಗುತ್ತಿದೆ. ಟ್ರಾಕ್ಟರ್ನಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದಾಗ ಚಾಲಕ ಅತಿವೇಗದಿಂದ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. ಇಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





