ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಹುದ್ದೆ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದ್ದು, ಹೈಕಮಾಂಡ್ ಇಂದು ಸಭೆ ನಡೆಸಿ ಅಭ್ಯರ್ಥಿ ಘೋಷಿಸಲಿದೆ. ಈ ನಿಟ್ಟಿನಲ್ಲಿ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಹಿರಿಯ ನಾಯಕಿ ವಸುಂಧರಾ ರಾಜೇ ಅವರ ಮನೆಯಲ್ಲಿ ಹಲವು ಮಂದಿ ಶಾಸಕರು ಬೀಡುಬಿಟ್ಟಿದ್ದಾರೆ. ಇಂದು ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮಾಜಿ ಸಿಎಂ ವಸುಂಧರಾ ರಾಜೇ ಅವರ ನಿವಾಸಕ್ಕೆ ಪಕ್ಷದ ಶಾಸಕರು ಆಗಮಿಸಿದ್ದಾರೆ. ಸಿವಿಲ್ ಲೈನ್‌ನ ಪಕ್ಷದ ಶಾಸಕ ಗೋಪಾಲ್ ಶರ್ಮಾ ಅವರು ರಾಜೇ ಅವರ ನಿವಾಸವನ್ನು ತಲುಪಿದ ಶಾಸಕರಲ್ಲಿ ಸೇರಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಶರ್ಮಾ ಅವರು ರಾಜೇ ಅವರನ್ನು ಭೇಟಿ ಮಾಡುತ್ತಿರುವುದು ಇದೇ ಮೊದಲು.
ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲು ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಗೆ ಮುಂಚಿತವಾಗಿ ಇಂದು ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ. ಕೆಲವು ಶಾಸಕರು ಬೆಳಿಗ್ಗೆ ವಸುಂಧರಾ ರಾಜೇ ಅವರನ್ನು ಭೇಟಿ ಮಾಡಿದ್ದು ಸಂಜೆಯ ಸಭೆಯ ಫಲಿತಾಂಶದ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





