ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸಿನಿಮಾ ಶೈಲಿಯಲ್ಲಿ ಕಿಲೋಮೀಟರ್‌ಗಟ್ಟಲೇ ರೌಡಿಶೀಟರ್ ಅನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ.ಬೆಂಗಳೂರಿನ ಲಕ್ಕಸಂದ್ರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಜೈಪ್ರಕಾಶ್ ಅಲಿಯಾಸ್ ಅಪ್ಪಿ ಕೊಲೆಯಾದ ರೌಡಿಶೀಟರ್. ಸಂಜೆ 7 ಗಂಟೆ ಸುಮಾರಿನಲ್ಲಿ ಐದಾರು ದುಷ್ಕರ್ಮಿಗಳ ಗುಂಪು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ. ಹನುಮ ಜಯಂತಿ ಹಿನ್ನೆಲೆ ಜೈಪ್ರಕಾಶ್ ಲಕ್ಕಸಂದ್ರ ಬಸ್ ನಿಲ್ದಾಣದ ಬಳಿ ಆಂಜನೇಯ ದೇವಸ್ಥಾನದಲ್ಲಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಈ ವೇಳೆ ಐದಾರು ಜನ ಆತನನ್ನು ಗಮನಿಸಿದ್ದಾರೆ. ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಜೈಪ್ರಕಾಶ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವೇಳೆ ಜೈಪ್ರಕಾಶ್ನನ್ನು ಹಂತಕರು ಸುಮಾರು ಕಿಲೋಮೀಟರ್ ದೂರ ಅಟ್ಟಿಸಿಕೊಂಡು ಬಂದಿದ್ದಾರೆ. ಹೀಗಾಗಿ, ಆತ ಹೋಟೆಲ್ ಒಳಗೆ ಹೋಗಿದ್ದಾನೆ. ಆದರೂ ಬಿಡದೇ ಸಾರ್ವಜನಿಕರ ಮುಂದೆಯೇ ಪಾಪಿಗಳು ಆತನನ್ನು ಕೊಚ್ಚಿ ಕೊಲೆಗೈದಿದ್ದಾರೆ. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.ಘಟನಾ ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ, ಎಫ್‍ಎಸ್‍ಎಲ್ ತಂಡ, ಶ್ವಾನ ದಳ ಹಾಗೂ ಆಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಆಗ್ನೇಯ ವಿಭಾಗ ಡಿಸಿಪಿ 5 ತಂಡ ರಚನೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





