ಹುಬ್ಬಳ್ಳಿ: ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ದನಗಳ ಹಾವಳಿ ಜೋರಾಗಿದೆ. ಬಿಡಾಡಿ ದನಗಳ ನಿಯಂತ್ರಣ ಮಾಡುವುದೇ ಪಾಲಿಕೆಗೆ ದೊಡ್ಡ ಸವಾಲಾಗಿದ್ದು, ಈಗ 24 ಗಂಟೆ ಗಡುವು ನೀಡಿದೆ. ಬಿಡಾಡಿ ದನಗಳ ವಾರಸುದಾರರಿಗೆ ಬಿಸಿ ಮುಟ್ಟಿಸಲು ಈಗ ಪಾಲಿಕೆ ಮುಂದಾಗಿದೆ.ಹೌದು..

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆಗಳು, ವೃತ್ತಗಳು, ಆಟದ ಮೈದಾನ, ಮಾರುಕಟ್ಟೆ, ಉದ್ಯಾನವನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳಾದ ದನ, ಎಮ್ಮೆ, ಕರು ಹಾಗೂ ಹಂದಿಗಳನ್ನು ಹೆಚ್ಚಾಗಿ ಬಿಡಲಾಗುತ್ತಿದೆ. ಜಾನುವಾರುಗಳಿಂದ ಪಾದಚಾರಿಗಳು, ಮಕ್ಕಳು, ವೃದ್ಧರು,

ವಾಹನ ಚಾಲಕರು ಮತ್ತು ವ್ಯಾಪಾರಸ್ಥರಿಗೆ ಈಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿರುತ್ತವೆ. ನಿರಂತರವಾಗಿ ಇವುಗಳಿಂದ ಸಾರ್ವಜನಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇನ್ನೂ

ಈ ಕುರಿತು ಮಹಾನಗರ ಪಾಲಿಕೆಯ ಸಹಾಯವಾಣಿಗೆ ಸಾಕಷ್ಟು ದೂರುಗಳು ಸಹ ಸ್ವೀಕೃತವಾಗಿರುತ್ತವೆ. ಬಿಡಾಡಿ ಜಾನುವಾರುಗಳ ಮಾಲೀಕರು ತಮ್ಮ ತಮ್ಮ ಜಾನುವಾರುಗಳನ್ನು 24 ಗಂಟೆಗಳೊಳಗಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡು ಸಾಕಬೇಕು. ತಪ್ಪಿದಲ್ಲಿ ರಸ್ತೆಗಳಲ್ಲಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿರುವ ಜಾನುವಾರುಗಳನ್ನು ಬಿಡಾಡಿ ಪ್ರಾಣಿಗಳೆಂದು ಪರಿಗಣಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ

ಪಾಲಿಕೆಯಿಂದ ಹಿಡಿದು ವಿವಿಧ ಗೋಶಾಲೆಗೆ ಬಿಡಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.ಒಟ್ಟಿನಲ್ಲಿ ಬಿಡಾಡಿ ದನಗಳ ನಿಯಂತ್ರಣಕ್ಕೆ ಪಾಲಿಕೆ ಏನೋ ನಿರ್ಧಾರ ಮಾಡಿದೆ ನಿಜ ಆದರೆ ಯಾರದೇ ಒತ್ತಡಕ್ಕೆ ಮಣಿಯದೇ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತದೆಯೋ ಅಥವಾ ಮತ್ತೊಮ್ಮೆ ಕಂಡು ಕಾಣದಂತೇ ಜಾಣಮೌನತನ ವಹಿಸುತ್ತದೆಯೋ ಕಾದು ನೋಡಬೇಕಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

