ಕಲಬುರಗಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಚಿಂಚೋಳಿ ತಾಲ್ಲೂಕಿನ ಸುಲೇಪೇಟದ ಶಿಲ್ಪಾ ಎಂಬುವವರನ್ನು ಜಿಲ್ಲಾಸ್ಪತ್ರೆಗೆ ಕರೆತರುವಾಗ ಮೂರು ಬಾರಿ ಆಂಬುಲೆನ್ಸ್ ಬದಲಿಸಲಾಗಿತ್ತು. ಈ ವೇಳೆ ದಾರಿ ಮಧ್ಯದಲ್ಲೇ ಹೆರಿಗೆಯಾಗಿ ಮಗು ಸಾವನ್ನಪ್ಪಿತ್ತು. ಮೂರು ಬಾರಿ ಆಂಬುಲೆನ್ಸ್ ಬದಲಿಸಿದ್ದರಿಂದ ತಮ್ಮ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು ಕಣ್ಣೀರಿಟ್ಟಿದ್ದರು.
ಆಂಬುಲೆನ್ಸ್‌ಗಳ ಕೊರತೆ, ಸಕಾಲಕ್ಕೆ ಸಿಗದ ಸೇವೆ, ಅಧ್ವಾನ ರಸ್ತೆಗಳು, ಆಂಬುಲೆನ್ಸ್‌ನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯದ ಕೊರತೆ, ಸಿಬ್ಬಂದಿ ಇಲ್ಲದಿರುವಿಕೆ ಮತ್ತಿತರ ಕಾರಣಗಳಿಂದಾಗಿ ಹಲವು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಪರಿತಪಿಸುವುದು ಜಿಲ್ಲೆಯಲ್ಲಿ ಸಾಮಾನ್ಯ ಎಂಬಂತಾಗಿದೆ.
ಜಿಲ್ಲೆಯಲ್ಲಿರುವ ಒಟ್ಟು 16 ಸಮುದಾಯ ಆರೋಗ್ಯ ಕೇಂದ್ರಗಳು, 84 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಆಂಬುಲೆನ್ಸ್ ಸೇವೆ ಇಲ್ಲ.
ಸುಗಮ ಸಂಚಾರಕ್ಕೆ ಅನುಕೂಲವಿಲ್ಲದ ರಸ್ತೆಗಳು, ರೋಗಿಯನ್ನು ಕರೆದೊಯ್ಯುವಾಗ ಪ್ರತಿ 25 ಕಿಲೋ ಮೀಟರ್‌ಗೊಮ್ಮೆ ಆಂಬುಲೆನ್ಸ್ ಬದಲಿಸಬೇಕೆನ್ನುವ ನಿಯಮ, ಸಾಕಷ್ಟು ವರ್ಷ ನಿರ್ವಹಣೆ ಇಲ್ಲದ ಆಂಬುಲೆನ್ಸ್‌ಗಳು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿವೆ. ಕನಿಷ್ಠ 15 ವರ್ಷಗಳಿಗೊಮ್ಮೆ ಆಂಬುಲೆನ್ಸ್ ಬದಲಿಸಬೇಕು ಎಂಬ ನಿಯಮ ಕೆಲವು ಕಡೆ ಪಾಲನೆಯಾಗಿಲ್ಲ.
ಹೀಗಾಗಿ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಒದಗಿಸುವ ಆಂಬುಲೆನ್ಸ್ ಸೇವೆಯ ‘ವೇಗ’ ಮಾತ್ರ ಆಮೆಗತಿಯಲ್ಲಿ ಇದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ 108 ಆರೋಗ್ಯ ಸೇವೆಯ ಜಿಲ್ಲಾ ಸಂಯೋಜಕ ನಮಗೆ ಅನುದಾನದ ಕೊರತೆ ಇಲ್ಲ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ 108 ಆರೋಗ್ಯ ಸೇವೆ ಇದೆ. ವೈದ್ಯಕೀಯ ಸೌಲಭ್ಯ ನಮಗೆ ಸಂಬಂಧಿಸಿದ ವಿಷಯವಲ್ಲ. ಒಂದು ಗಾಡಿಗೆ ಇಬ್ಬರು ಸಿಬ್ಬಂದಿ ಕಾಯಂ ಆಗಿ ಇರುತ್ತಾರೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

