ಬೆಂಗಳೂರು : ಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಅರಿತಿದ್ದ ಇಂಧಿರಾಗಾಂಧಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದಾರೆ ಇದು ಅತ್ಯಂತ ನಿಷ್ಠುರವಾಗಿದೆ ಅರಣ್ಯಾಧಿಕಾರಿಗಳೂ ಅಷ್ಟೇ ನಿಷ್ಠುರವಾಗಿ ಕಟ್ಟು ನಿಟ್ಟಾಗಿ ಅರಣ್ಯ ಒತ್ತುವರಿಯನ್ನು ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಸಮಾರಂಭದಲ್ಲಿ ಪದಕ ವಿತರಿಸಿ ಅವರು ಮಾತನಾಡಿದರು.
ಕಾಡು ಪ್ರಾಣಿಗಳಿಗೆ ಆಹಾರ, ಮೇವು ಮತ್ತು ನೀರು ಕಾಡಿನ ಒಳಗೇ ಅಗತ್ಯವಿದ್ದಷ್ಟು ದೊರೆತರೆ ಅವು ಕಾಡಿನಿಂದ ಹೊರಗೆ ಬರುವುದಿಲ್ಲ. ಆಗ ಮಾನವ ಪ್ರಾಣಿ ಸಂಘರ್ಷಕ್ಕೆ ತಡೆ ಬೀಳುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಸಚಿವ ಈಶ್ವರ್ ಖಂಡ್ರೆಯವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಿಮ್ಮ ಸಂಪೂರ್ಣ ಸಹಕಾರ ಸಿಕ್ಕರೆ ಇನ್ನಷ್ಟು ಕ್ರಾಂತಿಕಾರಕ ಕೆಲಸ ಮಾಡುತ್ತಾರೆ ಎಂದು ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿದ್ದರಾಮಯ್ಯ ಕರೆ ನೀಡಿದರು.
ವನ್ಯಜೀವಿ ಮತ್ತು ಅರಣ್ಯ ಸಂಪತ್ತು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಆಫ್ರಿಕಾ ಬಿಟ್ಟರೆ ಅತಿ ಹೆಚ್ಚು ಅರಣ್ಯ ಪ್ರಾಣಿ ಸಂಪತ್ತು ಇರುವುದು ಭಾರತದಲ್ಲೇ, ಹಾಗೆಯೇ ಅರಣ್ಯದ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ. ಅರಣ್ಯ ಸಂಪತ್ತು ಕಾಪಾಡುವ ವಿಚಾರದಲ್ಲಿ ಪದಕ ಪುರಸ್ಕೃತರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯ ಪಡೆ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

