ಮೈಸೂರು: ಚಾಮುಂಡೇಶ್ವರಿ ಬೆಟ್ಟವೂ ಸೇರಿದಂತೆ ಪ್ರಾಧಿಕಾರದ ಅಧೀನದ ದೇಗುಲಗಳ ಅಭಿವೃದ್ಧಿಗೆ ಮುಂದಿನ ಐದು ವರ್ಷದ ನೀಲನಕ್ಷೆ ರೂಪಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಹದೇಶ್ವರ ಬೆಟ್ಟದಲ್ಲಿ ಈಗಾಗಲೇ ಅಭಿವೃದ್ಧಿ ಪ್ರಾಧಿಕಾರವಿದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯ ಸವದತ್ತಿ ಎಲ್ಲಮ್ಮ, ಕೊಪ್ಪಳದ ಹುಲಿಗೆಮ್ಮ, ಘಾಟಿ ಸುಬ್ರಹ್ಮಣ್ಯ ದೇಗುಲಗಳಿಗೆ ಪ್ರತ್ಯೇಕ ಪ್ರಾಧಿಕಾರಗಳನ್ನು ರಚನೆ ಮಾಡಲಾಗಿದೆ. ಚಾಮುಂಡಿ ಬೆಟ್ಟವನ್ನು ಇನ್ನಷ್ಟು ಆಕರ್ಷಣೀಯ ಆಗಿಸುವ ಜೊತೆಗೆ ಪ್ರವಾಸಿಸ್ನೇಹಿ ಸೌಲಭ್ಯಗಳ ವಿಸ್ತರಣೆಗೆ ಒತ್ತು ನೀಡಲಾಗುವುದು ಎಂದು ಮಾಹಿತಿ ನೀಡಿದರು.ಮೈಸೂರಿನಲ್ಲಿ ಪ್ರತಿ ವರ್ಷ ವಿಶ್ವವಿಖ್ಯಾತ ದಸರಾ ನಡೆಯುತ್ತದೆ ಬೆಟ್ಟಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ ಅವರಿಗೆಂದು ಕೆಲವು ಅಭಿವೃದ್ಧಿ ಕಾರ್ಯಗಳು ಆಗಿದ್ದು, ಇನ್ನೂ ಕೆಲವು ಬಾಕಿ ಉಳಿದಿವೆ. ಚಾಮುಂಡಿ ಬೆಟ್ಟದ ಜೊತೆಗೆ ಈ ಪ್ರಾಧಿಕಾರಕ್ಕೆ ಸೇರಿದ 24 ದೇಗುಲಗಳಿದ್ದು, ಅವುಗಳ ಅಭಿವೃದ್ಧಿಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದರು.
ಬೆಟ್ಟದಲ್ಲಿ ಅಪರಾಧ ಕೃತ್ಯಗಳು ನಡೆಯದಂತೆ ನಿಗಾ ವಹಿಸಲು ಟಾಸ್ಕ್ ಪೋರ್ಸ್ ರಚಿಸಲಾಗುವುದು. ಯೂನಿಯನ್ ಬ್ಯಾಂಕ್ ನೆರವಿನೊಂದಿಗೆ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಎಲ್ಲ ಕಡೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುವುದು ಚಾಮುಂಡಿ ಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ-ಪಾನ್ ಮಾರಾಟ ಮತ್ತು ಸೇವನೆ ಸಂಪೂರ್ಣ ನಿಷೇಧಿಸಲಾಗಿದೆ ಪ್ಲಾಸ್ಟಿಕ್ ಮುಕ್ತ ಬೆಟ್ಟ ಎಂದು ಈಗಾಗಲೇ ಘೋಷಣೆ ಆಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

