ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಮಳವಳ್ಳಿ ತಾಲ್ಲೂಕಿನಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ಸೆಪ್ಟೆಂಬರ್ 14 ಹಾಗೂ 15 ರಂದು ಆಯೋಜಿಸಲಾಗಿದೆ ಎಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಿಳಿಸಿದರು.
ಶಿವನಸಮುದ್ರದ ಲಕ್ಷದ್ವೀಪ ಹೋಟೆಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸೆಪ್ಟೆಂಬರ್ 14 ರಂದು ಮಾನ್ಯ ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು, ಇದರೊಂದಿಗೆ ಲೇಜರ್ ಹಾಗೂ ಲೈಟಿಂಗ್ ಗಗಳನ್ನು ಸಹ ಉದ್ಘಾಟಿಸುವರು ಎಂದರು. ಗಗನಚುಕ್ಕಿಯನ್ನು ಪ್ರಸಿದ್ಧ ಪ್ರವಾಸಿತಾಣವಾಗಿಸಲು ಹಾಗೂ ಹೆಚ್ಚಿನ ಯುವಜನರನ್ನು ಆಕರ್ಷಿಸಲು ಜಲಪಾತೋತ್ಸವದಂತಹ ಕಾರ್ಯಕ್ರಮ ಅವಶ್ಯಕವಾಗಿದೆ ಎಂದರು.
ಎರಡು ದಿನಗಳ ಕಾಲ ನಡೆಯುವ ಗಗನಚುಕ್ಕಿ ಜಲಪಾತೋತ್ಸವದ ಹಿನ್ನಲೆ ಆಗಮಿಸುವ ಸಾರ್ವಜನಿಕರಿಗೆ ಕಾರ್ಯಕ್ರಮದ ಜೊತೆಗೆ ಉಚಿತ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಊಟದ ವ್ಯವಸ್ಥೆ ಮಾಡಲಾಗಿದೆ. ಪರಿಸರದ ಸೌಂದರ್ಯ ಸವಿಯುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಬೆಳಿಗ್ಗೆಯಿಂದ ರಾತ್ರಿಯವರೆಗೆ ಇರುತ್ತದೆ ಎಂದರು. ಗಗನ ಚುಕ್ಕಿಯನ್ನು ಬೃಹತ್ ಆಕರ್ಷಣೀಯ ಕೇಂದ್ರವನ್ನಾಗಿಸಲು ವಿವಿಧ ಕ್ರೀಡಾ ಚಟುವಟಿಕೆಗಳು ಹಾಗೂ ಇಲ್ಲಿ ಸಿಗುವ ಸೌಲಭ್ಯದೊಂದಿಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಹಲವಾರು ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂದರು.
ಏಷಿಯಾದಲ್ಲೇ ಮೊದಲು ಜಲ ವಿದ್ಯುತ್ ಉತ್ಪಾದನೆ ಮಾಡಿದ ಹೆಗ್ಗಳಿಕೆ ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ಸಲ್ಲುತ್ತದೆ. ಮೈಸೂರು ಮಂಡ್ಯ ಚಾಮರಾಜನಗರ ಜಿಲ್ಲೆಗಳಲ್ಲಿ ಇರುವ ಪ್ರವಾಸಿ ಸ್ಥಳಗಳ ಪ್ರವಾಸಿ ಸರ್ಕೂಟ್ ರಚಿಸಬೇಕು. ಇದಲ್ಲದೇ ಸುತ್ತ ನೀರಿರುವ ಐಲ್ಯಾಂಡ್ ಪ್ರದೇಶ ಗಗನ ಚುಕ್ಕಿಯಲ್ಲಿದ್ದು, ಇಲ್ಲಿ ಸಾಕು ಪ್ರಣಿಗಳ ಪ್ರಾಣಿ ಸಂಗ್ರಾಹಲಯ, ಸುತ್ತ ವಾಕಿಂಗ್ ಪಾಥ್ ನಿರ್ಮಿಸಲು ಚಿಂತಿಸಲಾಗುತ್ತಿದ್ದು, ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದ್ದು, ಬೆಳಗಿನ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದರಿಗೆ ನೀಡಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

