ಬಾಗಲಕೋಟೆ: ಫಲಾನುಭವಿಗಳನ್ನು ಅನಗತ್ಯವಾಗಿ ಅಲೆದಾಡಿಸಬೇಡಿ, ಪ್ರಾಥಮಿಕ ಹಂತದಲ್ಲೇ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಲೀಡ್ ಬ್ಯಾಂಕ್ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ರೈತರ ಮಕ್ಕಳು ಶಿಕ್ಷಣ ಸಾಲ ಸೌಲಭ್ಯಕ್ಕಾಗಿ ಬಂದಲ್ಲಿ ನಿಯಮಾವಳಿಗಳು ಸ್ವಲ್ಪ ಸರಳವಾಗಿರಲಿ. ಯಾವ, ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದನ್ನು ಫಲಕಗಳಲ್ಲಿ ಪ್ರದರ್ಶಿಸಿ, ತಾಂತ್ರಿಕ ತೊಂದರೆಗಳಿದ್ದಲ್ಲಿ ತಿಳಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಬ್ಯಾಂಕ್‍ಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇರುವುದು ಕೂಡ ಅರ್ಹ ಫಲಾನುಭವಿಗಳು ಪರದಾಡಲು ಒಂದು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಬ್ಯಾಂಕ್‍ಗಳಿಗೆ ತೆರಳಿ ವಿವಿಧ ಯೋಜನೆಯಡಿ ಸಿಗುವ ಸಾಲ ಸೌಲಭ್ಯವನ್ನು ಫಲಾನುಭವಿಗಳಿಗೆ ದೊರಕಿಸಿಕೊಡಿ. ಸಣ್ಣಪುಟ್ಟ ಕಾರಣಕ್ಕೆ ತಡೆ ಹಿಡಿಯುವ ಕೆಲಸ ಮಾಡಬೇಡಿ ಎಂದು ವಿವಿಧ ನಿಗಮಗಳ ಅಧಿಕಾರಿಗಳಿಗೆ ಎಚ್ಚರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

