Breaking News

ಜ.1 ರಿಂದ ಎಲ್ಲಾ ಭೂ ಮಂಜೂರು ದಾಖಲೆಗಳ ಡಿಜಿಟಲೀಕರಿಸಲು ಕ್ರಮ: ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ : ರೈತರಿಗಾಗುತ್ತಿರುವ ಶೋಷಣೆಗಳನ್ನು ತಪ್ಪಿಸುವ ಸಲುವಾಗಿ ಜನವರಿ.01 ರಿಂದ ಈವರೆಗಿನ ಎಲ್ ಭೂ-ಮಂಜೂರು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ್ದ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಬಗರ್ ಹುಕುಂ ಯೋಜನೆ ಅಡಿಯಲ್ಲಿ 1999 ರಿಂದ 2004ರ ಅವಧಿಯಲ್ಲಿ ಜಮೀನು ಮಂಜೂರು ಮಾಡಲಾಗಿದ್ದರೂ ಸಾಗುವಳಿ ಚೀಟಿ ನೀಡಿಲ್ಲ, ಕೆಲವರಿಗೆ ಸಾಗುವಳಿ ಚೀಟಿ ನೀಡಿದ್ದರೂ ಖಾತೆ ನೀಡಿಲ್ಲ.
ಅಲ್ಲದೆ, ಈ ವರ್ಷ ಬಗರ್ ಹುಕುಂ ಅಡಿಯಲ್ಲಿ ಸಾವಿರಾರು ರೈತರ ಅರ್ಜಿಗಳನ್ನೇ ವಜಾ ಮಾಡಲಾಗಿದೆ. ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಈ ಹಿಂದೆ ನಮೂನೆ 50-53 ರ ಅಡಿ ಭೂ ಮಂಜೂರು ಪಡೆಯದವರೂ ಸಹ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಕೆಲವರು ದಾಖಲೆ ಬಚ್ಚಿಟ್ಟು ರೈತರಿಗೆ ಸಮಸ್ಯೆ ನೀಡುತ್ತಿದ್ದಾರೆ. ಬಗರ್‌ ಹುಕುಂ ಯೋಜನೆ ಅಡಿಯಲ್ಲಿ ನಿಜವಾಗಿಯೂ ಭೂ ಮಂಜೂರು ಮಾಡಿರುವವರಿಗೆ ದಾಖಲೆ ಇಲ್ಲದಂತಾಗಿದೆ. ಹೀಗಾಗಿ ಜನವರಿ 01 ರಿಂದ ಎಲ್ಲಾ ತಾಲೂಕು ಕಚೇರಿಯಲ್ಲಿ ಭೂ-ಮಂಜೂರಾತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ಭೂ ಮಂಜೂರಾತಿ ದಾಖಲೆಗಳನ್ನು ಡಿಜಿಟಲೀಕರಿಸುವಾಗ ಹಲವು ರೈತರಿಗೆ ಸಂಬಂಧಿಸಿದ ಹಳೆಯ ದಾಖಲೆಗಳೂ ಲಭ್ಯವಾಗಲಿವೆ. ಇವುಗಳ ಆಧಾರದಲ್ಲಿ ಈ ಹಿಂದೆ ಭೂ ಮಂಜೂರಾಗಿಯೂ ಸಾಗುವಳಿ ಚೀಟಿ ಹಾಗೂ ಖಾತೆ ಪಡೆಯದ ರೈತರಿಗೆ ಸೂಕ್ತ ದಾಖಲೆಗಳನ್ನು ಒದಗಿಸಬಹುದು. ಅಲ್ಲದೆ, ಮುಂದಿನ ದಿನಗಳಲ್ಲಿ ದಾಖಲೆಗಳನ್ನು ತಿದ್ದುವ ಹಾಗೂ ಬಚ್ಚಿಡುವ ಮೂಲಕ ರೈತರನ್ನು ಶೋಷಣೆಗೆ ಒಳಪಡಿಸುವಂತಹ ಕೆಲಸಗಳಿಗೆ ಶಾಶ್ವತ ಪರಿಹಾರವಾಗಲಿದೆ ಎಂದು ಸದನಕ್ಕೆ ಅವರು ಭರವಸೆ ನೀಡಿದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *