ನವದೆಹಲಿ: ಆಹಾರ ಉತ್ಪಾದನೆಗೆ ಭಾರತದಲ್ಲಿ ವಿಶಾಲ ಅವಕಾಶವಿದ್ದು, ಜಗತ್ತಿಗೇ ಆಹಾರೋತ್ಪನ್ನ ಪೂರೈಸಬಹುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ದೆಹಲಿಯಲ್ಲಿ ಆಯೋಜಿಸಿದ್ದ ವರ್ಲ್ಡ್ ಫುಡ್ ಇಂಡಿಯಾ 2024 ಮೇಳದ ಉದ್ಘಾಟನೆ ವೇಳೆ ಮಾತನಾಡಿ, ಗುಣಮಟ್ಟದ ಆಹಾರ ಉತ್ಪಾದನೆಯಲ್ಲಿ ಭಾರತ ವಿಶ್ವಪ್ರಸಿದ್ಧವಾಗಿದೆ ಎಂದು ಹೇಳಿದರು. ಆಹಾರ ಧಾನ್ಯಗಳ ಉತ್ಪಾದನೆ ಮತ್ತು ಸಂಸ್ಕರಣೆ ಜತೆಗೆ ಅತ್ಯುತ್ತಮ ಮಾರುಕಟ್ಟೆಯನ್ನೂ ಭಾರತ ಕಂಡುಕೊಳ್ಳುತ್ತಿದೆ ಎಂದ ಸಚಿವರು, ಹಾಲು, ಅಕ್ಕಿ, ಸಕ್ಕರೆ ಮುಂತಾದ ಆಹಾರೋತ್ಪಾದನೆಗಳಿಗೆ ಭಾರತವೇ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಿದರು.
ಭಾರತದ ಆಹಾರ, ಧಾನ್ಯ ಮತ್ತು ಉತ್ಪನ್ನಗಳಿಗೆ ಜಾಗತಿಕವಾಗಿ ಹೆಚ್ಚು ಬೇಡಿಕೆಯಿದೆ. ಹಾಗಾಗಿ ಕೃಷಿ ಉತ್ಪನ್ನಗಳ ಗುಣಮಟ್ಟದ ಸಂಸ್ಕರಣೆ, ಆಹಾರೋತ್ಪನ್ನಗಳ ಅಧಿಕ ಉತ್ಪಾದನೆಗೆ ಮುಂದಾದರೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಲಿದೆ ಎಂದು ತಿಳಿಸಿದರು.
ಆಹಾರ ಉತ್ಪನ್ನಗಳ ಸಂಸ್ಕರಣೆ, ಗುಣಮಟ್ಟ ಕಾಯ್ದುಕೊಳ್ಳುವುದು ಹಾಗೂ ಮಾರುಕಟ್ಟೆ ಕಂಡುಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಭಾರತ ಇದರಲ್ಲಿ ಮುಂಚೂಣಿ ಪಾತ್ರ ವಹಿಸಿದೆ ಎಂದರು. ನಾವು ಸಾಕಷ್ಟು ಆಹಾರೋತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆ ಮಾಡಬಹುದು. ಅಂಥ ಅವಕಾಶ ನಮ್ಮ ರೈತರು ಮತ್ತು ಉತ್ಪಾದಕರಿಗೆ ಇದೆ. ಭವಿಷ್ಯದಲ್ಲಿ ನಾವು ಭಾರತೀಯ ಮಾರುಕಟ್ಟೆ ಹೊರತಾಗಿ ಜಗತ್ತಿಗೇ ಆಹಾರ ಪೂರೈಸಬಹುದು ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

