Breaking News

ಉಪಚುನಾವಣೆ ಗೆಲ್ಲಲು ಬಿಜೆಪಿ ರಾಜ್ಯ ಕೋರ್ ಕಮೀಟಿ ಸಭೆ

ಬೆಂಗಳೂರು: ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಉಪ ಚುನಾವಣೆಗೆ ಸಂಬಂಧಿಸಿ ವಿಸ್ತ್ರತವಾಗಿ ಚರ್ಚೆ ನಡೆಸಿದ್ದೇವೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚನ್ನಪಟ್ಟಣ, ಸೊಂಡೂರು ಮತ್ತು ಶಿಗ್ಗಾಂವಿ ಉಪ ಚುನಾವಣೆ ಯಾವುದೇ ಸಮಯದಲ್ಲಿ ಘೋಷಣೆ ಆಗಬಹುದು. 3 ಉಪ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಿ, ಗೆಲ್ಲುವ ದೃಷ್ಟಿಯಿಂದ ವಿಶೇಷ ಪ್ರಯತ್ನ ಮಾಡಬೇಕು ಎಂಬ ಚರ್ಚೆ ನಡೆದಿದೆ ಎಂದರು.
ಅಭ್ಯರ್ಥಿ ಸಂಬಂಧಿಸಿ ಎನ್‍ಡಿಎ ಮಿತ್ರ ಪಕ್ಷವಾದ ಜೆಡಿಎಸ್ ಮತ್ತು ನಮ್ಮ ಕೇಂದ್ರೀಯ ನಾಯಕರ ಜೊತೆ ಸಮಾಲೋಚನೆ ಮಾಡಿ, ನಿರ್ಣಯಿಸಲು ಕೋರ್ ಕಮಿಟಿ ನಿರ್ಧರಿಸಿದೆ. ಈ ಹಿಂದೆ ಶ್ರೀನಿವಾಸ ಪೂಜಾರಿಯವರು ಚುನಾಯಿತರಾಗಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ. ಆ ಉಪ ಚುನಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೋಗಿ ಅಪೇಕ್ಷಿತರ ವರದಿ, 2 ಜಿಲ್ಲೆಗಳ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಬಂದಿದ್ದರು. ಇಲ್ಲಿ ಚರ್ಚಿಸಿದ್ದು, ಕೇಂದ್ರೀಯ ನಾಯಕತ್ವದ ಜೊತೆ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಕೊಡಲಾಗಿದೆ ಎಂದರು.
ಪ್ರಚಲಿತ ರಾಜಕೀಯ ವಿದ್ಯಮಾನಗಳ ಕುರಿತು ಕೂಡ ಚರ್ಚಿಸಲಾಗಿದೆ. ಈ ಸರ್ಕಾರದ ಮೇಲೆ ನಿರಂತರವಾಗಿ ಬರುತ್ತಿರುವ ಆಧಾರಸಹಿತವಾದ ಭ್ರಷ್ಟಾಚಾರದ ಆರೋಪಗಳು, ಅದರ ವಿರುದ್ಧ ಇನ್ನಷ್ಟು ಜನಾಂದೋಲನ ರೂಪಿಸುವ ಕುರಿತು ಚರ್ಚೆ ಮಾಡಿದ್ದೇವೆ. ಈ ಸರ್ಕಾರದ ಹಿಂದೂ ವಿರೋಧಿ ನೀತಿ, ಗಣೇಶೋತ್ಸವದ ಮೇಲೆ ನಿರ್ಬಂಧ ಹೇರುತ್ತಿರುವುದು, ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳದಂತೆ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಬಜರಂಗದಳದ ಮುಖಂಡರ ಮೇಲೆ ದಿಗ್ಬಂಧನವನ್ನು ಹಾಕುತ್ತಿರುವುದು, ಓಲೈಕೆಯ ರಾಜಕಾರಣ ಕುರಿತು ಚರ್ಚಿಸಿದ್ದೇವೆ. ಈ ಸಂಬಂಧ ಪರಿವಾರ ಸಂಘಟನೆಗಳ ಪ್ರಮುಖರ ಜೊತೆ ಸಮಾಲೋಚನೆ ನಡೆಸಿ ಹೋರಾಟ ನಡೆಸುವ ಚಿಂತನೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ನಡೆದಿದೆ ಎಂದರು.

Share News

About BigTv News

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *