Breaking News

ಕೇಂದ್ರದ ರಾಜ್ಯ ವಿಪತ್ತು ನಿಧಿಯಿಂದ 14 ಪ್ರವಾಹ ಪೀಡಿತ ರಾಜ್ಯಗಳಿಗೆ 5858 ಕೋಟಿ ರೂ. ಬಿಡುಗಡೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು 14 ಪ್ರವಾಹ ಪೀಡಿತ ರಾಜ್ಯಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್) ಕೇಂದ್ರ ಸರ್ಕಾರದ ಪಾಲು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್) ಮುಂಗಡವಾಗಿ 5,858.60 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಪ್ರವಾಹ ಪೀಡಿತ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಕೇರಳ, ತ್ರಿಪುರಾ, ನಾಗಾಲ್ಯಾಂಡ್, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಣಿಪುರ ರಾಜ್ಯಗಳಿಗೆ ಸ್ಥಳದಲ್ಲೇ ಹಾನಿಯನ್ನು ನಿರ್ಣಯಿಸಲು ಅಂತರ ಸಚಿವಾಲಯದ ಕೇಂದ್ರ ತಂಡಗಳನ್ನು ಕಳುಹಿಸಲಾಗಿದೆ. ಇತ್ತೀಚೆಗೆ ಪ್ರವಾಹದಿಂದ ಹಾನಿಗೊಳಗಾದ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಥಳದಲ್ಲೇ ಹಾನಿಯ ಮೌಲ್ಯಮಾಪನ ಮಾಡಲು ಐಎಂಸಿಟಿ ಗಳನ್ನು ಕಳುಹಿಸಲಾಗುವುದು ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಐಎಂಸಿಟಿಯ ಮೌಲ್ಯಮಾಪನ ವರದಿಯನ್ನು ಪಡೆದ ನಂತರ ಪೀಡಿತ ರಾಜ್ಯಗಳಿಗೆ ಎನ್‌ಡಿಆರ್‌ಎಫ್‌ನಿಂದ ಹೆಚ್ಚುವರಿ ಆರ್ಥಿಕ ಸಹಾಯವನ್ನು ಮಂಜೂರು ಮಾಡಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಮಾರ್ಗದರ್ಶನದಲ್ಲಿ ಈ ವರ್ಷ 21 ರಾಜ್ಯಗಳಿಗೆ 14,958 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಸ್‌ಡಿಆರ್‌ಎಫ್‌ನಿಂದ 21 ರಾಜ್ಯಗಳಿಗೆ 9,044 ಕೋಟಿ ರೂಪಾಯಿ, ಎನ್‌ಡಿಆರ್‌ಎಫ್‌ನಿಂದ 15 ರಾಜ್ಯಗಳಿಗೆ 4528 ಕೋಟಿ ರೂಪಾಯಿ ಮತ್ತು ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿಯಿಂದ 11 ರಾಜ್ಯಗಳಿಗೆ 1385 ಕೋಟಿ ರೂಪಾಯಿ ಸೇರಿದೆ ಎಂದು ಸಚಿವಾಲಯ ತಿಳಿಸಿದೆ. ಈ ವರ್ಷ ಮಾನ್ಸೂನ್ ಸಮಯದಲ್ಲಿ ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದ ಈ ರಾಜ್ಯಗಳು ಹಾನಿಗೊಳಗಾಗಿವೆ. ಹಣಕಾಸಿನ ನೆರವಿನ ಹೊರತಾಗಿ ಅಗತ್ಯವಿರುವ ಎನ್ ಡಿ ಆರ್ ಎಫ್ ಮತ್ತು ಸೇನಾ ತಂಡಗಳ ನಿಯೋಜನೆ ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಎಲ್ಲಾ ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಎಲ್ಲಾ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *