ಮಾಸ್ಕೋ: ರಷ್ಯಾ ಹಾಗೂ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16 ನೇ ಶೃಂಗಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಸಭೆ ಆಯೋಜನೆ ಮಾಡಿದ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ಅಭಿನಂದನೆ ತಿಳಿಸಿದರು. ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ, ಯುದ್ಧವನ್ನಲ್ಲ ಎಂದು ಅಭಿಪ್ರಾಯಪಟ್ಟರು.
ಕೋವಿಡ್‌ನಂತಹ ಸವಾಲುಗಳನ್ನು ನಾವು ಒಟ್ಟಾಗಿ ಜಯಿಸಿದ್ದೇವೆ. ಮುಂದಿನ ಪೀಳಿಗೆಯ ಸುರಕ್ಷಿತ, ಸಶಕ್ತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲು ನಾವು ಸಂಪೂರ್ಣವಾಗಿ ಸಮರ್ಥರಿದ್ದೇವೆ ಎಂದರು. ಭಯೋತ್ಪಾದನೆ ವಿರುದ್ಧ ಜಾಗತಿಕ ಏಕತೆಗೆ ಕರೆ ನೀಡಿದ ಪ್ರಧಾನಿ ಇಂತಹ ಗಂಭೀರ ವಿಷಯಗಳಲ್ಲಿ ದ್ವಂದ್ವ ನಿಲುವಿಗೆ ಅವಕಾಶವಿಲ್ಲ ಎಂದು ಹೇಳಿದರು.
ಜಗತ್ತಿನಲ್ಲಿ ಯುದ್ಧದ ಹೊರತಾಗಿಯೂ ಚರ್ಚಿಸಲು ಅನೇಕ ಗಂಭೀರ ವಿಷಯಗಳಿವೆ. ಜಗತ್ತಿನಲ್ಲಿ ಹಣದುಬ್ಬರ ಹೆಚ್ಚಾಗಿದೆ ಆರೋಗ್ಯ , ಇಂಧನ, ಮೂಲಭೂತ ಸೌರ್ಕಯಗಳ ಕುರಿತು ನಾವು ಚರ್ಚಿಸಬೇಕು. ಸೈಬರ್ ಕ್ರೈಂನಂತಹ ಹೊಸ ಸವಾಲುಗಳು ನಮ್ಮೆದುರಿವೆ ಅವುಗಳನ್ನು ಒಟ್ಟಾಗಿ ಎದುರಿಸಬೇಕು. ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಶಾಂತಿ ಕಾಪಾಡಬೇಕೆ ವಿನಃ ಯುದ್ಧ ಬೆಂಬಲಿಸಬಾರದು ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

