Breaking News

ಗೃಹಲಕ್ಷ್ಮಿ ಯೋಜನೆಯಡಿ ಅಗಸ್ಟ್ 2023 ರಿಂದ ಈವರೆಗೆ 1.25 ಕೋಟಿ ಫಲಾನುಭವಿಗಳ ನೋಂದಣಿ

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ 1.25 ಕೋಟಿ ಫ‌ಲಾನುಭವಿಗಳು ನೋಂದಣಿಯಾಗಿದ್ದು, 2023ರ ಆಗಸ್ಟ್‌ನಿಂದ 2024ರ ಜೂನ್‌ ವರೆಗೆ ಪ್ರತಿಯೊಬ್ಬರಿಗೂ ಮಾಸಿಕ ತಲಾ 2 ಸಾವಿರ ರೂ.ಗಳಂತೆ 22 ಸಾವಿರ ರೂ.ಪಾವತಿಸಲಾಗಿದೆ.
ಜುಲೈ ಹಾಗೂ ಆಗಸ್ಟ್‌ ತಿಂಗಳ ಧನ ಸಹಾಯವನ್ನು ಅರ್ಹ ಫ‌ಲಾನುಭವಿಗಳ ಖಾತೆಗಳಿಗೆ ಪಾವತಿಸಲು ಅನುದಾನ ಬಿಡುಗಡೆಗೊಳಿಸಿ ಆದೇಶಿಸಿದ್ದು, ಸಂಬಂಧಿಸಿದ ಬಿಲ್‌ಗ‌ಳನ್ನು ಸಿದ್ಧಪಡಿಸಿ ಖಜಾನೆಗೆ ಸಲ್ಲಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ರಾಜ್ಯಾದ್ಯಂತ 1.82 ಲಕ್ಷ ಗೃಹಲಕ್ಷ್ಮೀಯರಿಗೆ ವಿವಿಧ ತಾಂತ್ರಿಕ ಸಮಸ್ಯೆಗಳಿಂದ ಧನಸಹಾಯ ಪಾವತಿಯಾಗಿಲ್ಲ ಎಂದು ವರದಿಯಾಗಿದ್ದು, ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಅಂತಿಮ ದಿನಾಂಕ ನಿಗದಿ ಆಗದೇ ಇರುವುದರಿಂದ ಪ್ರತೀ ದಿನವೂ ಅರ್ಜಿಗಳು ಬರುತ್ತಲೇ ಇರುತ್ತವೆ.
ಹೊಸ ಅರ್ಜಿಗಳ ನೋಂದಣಿ ಸಂದರ್ಭ ಬ್ಯಾಂಕ್‌ ಖಾತೆಗೆ ಆಧಾರ್‌ ವಿಲೀನ ಆಗದೇ ಇರುವುದು, ಎನ್‌ಪಿಸಿಐ ವಿಫ‌ಲಗೊಂಡಿರುವುದು, ಹೆಸರು ಮತ್ತಿತರ ವಿವರಗಳು ತಾಳೆ ಆಗದೇ ಇರುವುದು ಸೇರಿ ವಿವಿಧ ತಾಂತ್ರಿಕ ಸಮಸ್ಯೆಗಳು ಉದ್ಭವಿಸುತ್ತಿರುತ್ತವೆ. ಅಂತಹ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್‌) ದಿಂದ ಫ‌ಲಾನುಭವಿಗಳ ಮಾಹಿತಿ ಪಡೆದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ, ತಾಲೂಕು ಕಚೇರಿಗಳಿಗೆ ರವಾನಿಸಿ ಆಗಿಂದಾಗ್ಗೆ ಸಮಸ್ಯೆಗಳನ್ನು ಬಗೆಹರಿಸಲು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿಯಾಗಿ ಫ‌ಲಾನುಭವಿಗಳ ಮಾಹಿತಿ ಕೊರತೆಯಿಂದ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ವಹಿಸುವಂತೆ ಎಲ್ಲ ಬ್ಯಾಂಕ್‌ಗಳಿಗೂ ನಿರ್ದೇಶನ ನೀಡಲಾಗಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *