ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಟ್ಟು 13 ವಿದ್ಯುತ್ ಸರಬರಾಜು ಉಪಕೇಂದ್ರಗಳ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಇವುಗಳಲ್ಲಿ ಈಗಾಗಲೇ 4 ಉಪಕೇಂದ್ರಕ್ಕೆ ಟೆಂಡರ್ ಕರೆಯಲಾಗಿದೆ. ಇನ್ನುಳಿದ ಕೇಂದ್ರಗಳ ಸ್ಥಾಪನೆಗೂ ತ್ವರಿತ ಕ್ರಮ ಕೈಗೊಂಡು ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ಆಗುವ ತೊಂದರೆಗಳನ್ನು ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ನನಗೆ ಕೊಡಗು ಎಂದರೆ ಹೆಚ್ಚು ಪ್ರೀತಿ. ಇಲ್ಲಿಯೇ ಓದಿದ್ದೇನೆ, ನನ್ನ ಬೆಳವಣಿಗೆಗೂ ಕೊಡಗು ಕಾರಣವಾಗಿದೆ. ಹಾಗಾಗಿ, ನಾನು ಯಾವುದೇ ಸಂದರ್ಭದಲ್ಲೂ ಕೊಡಗನ್ನು ಅಲಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಹೇಳಿದರು.
ಸೋಮವಾರಪೇಟೆ, ಮಾದಾಪುರ, ಮೂರ್ನಾಡು, ಹುದಿಕೇರಿ, ಬಾಳೆಲೆ, ಸಿದ್ದಾಪುರ, ಕೂಡಿಗೆ, ಕೋಪಟ್ಟಿ, ಸಂಪಾಜೆ, ಕೊಡ್ಲಿಪೇಟೆ, ಕಾಟಕೇರಿ, ಕಳತ್ಮಾಡು, ಮರುಗೋಡು ಕೇಂದ್ರಗಳಲ್ಲಿ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ಅವುಗಳ ಪೈಕಿ ಹುದಿಕೇರಿ, ಬಾಳೆಲೆ, ಮೂರ್ನಾಡು ಹಾಗೂ ಸಿದ್ದಾಪುರ ಉಪಕೇಂದ್ರಗಳ ಸ್ಥಾಪನೆಗೆ ಟೆಂಡರ್ ಸಹ ಕರೆಯಲಾಗಿದೆ. ವಿವಿಧ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ₹ 208 ಕೋಟಿ ವಿನಿಯೋಗ ಮಾಡಲಾಗುತ್ತದೆ ಎಂದು ಹೇಳಿದರು.
ನೆಲದೊಳಗೆ ಕೇಬಲ್ ಹಾಕುವ ಪ್ರಸ್ತಾವವೂ ಇದೆ. ಅತಿ ಶೀಘ್ರದಲ್ಲಿ ಅದು ಸಹ ಜಾರಿಗೆ ಬರಲಿದ್ದು, ಜಿಲ್ಲೆಯಲ್ಲಿರುವ ವಿದ್ಯುತ್ ಸಮಸ್ಯೆ ನೀಗಿಸಲು ಎಲ್ಲ ಬಗೆಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಗೆ ಲೈನ್‌ಮೆನ್‌ಗಳು ಬರುವುದು ಕಡಿಮೆ. ಹಾಗಿದ್ದರೂ, ಹೆಚ್ಚುವರಿ ಲೈನ್‌ಮೆನ್‌ಗಳನ್ನು ನಿಯೋಜಿಸಿಕೊಂಡು, ಈ ಬಾರಿ ಮಳೆಗಾಲದಲ್ಲಿ ತ್ವರಿತವಾಗಿ ಸಂಪರ್ಕ ನೀಡಲಾಯಿತು ಎಂದು ಹೇಳಿದರು.
ಇದಕ್ಕೂ ಮುನ್ನ ನಡೆದ ಸೆಸ್ಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ಜಿಲ್ಲೆಯ ಹಾಡಿಗಳು ಸೇರಿದಂತೆ ಎಲ್ಲಾ ಕುಗ್ರಾಮಗಳಿಗೂ ಸಹ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ಸೆಸ್ಕ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

