ಕಲಬುರಗಿ : ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾದ ರೈತರ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಯಾಗಿ ನಷ್ಟ ಅನುಭವಿಸಿದ್ದು, ಸರಕಾರ ಈ ಕೂಡಲೇ ಪರಿಹಾರ ಮತ್ತು ಬೆಳೆ ವಿಮೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಜನಪರ ಕಲ್ಯಾಣ ವೇದಿಕೆಯು ಆಳಂದ ತಾಲ್ಲೂಕು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಆಗ್ರಹಿಸಿದೆ.
ಈ ಕುರಿತು ಆಳಂದ ಪಟ್ಟಣದ ಹೊರವಲಯದ ತಾಲ್ಲೂಕು ಆಡಳಿತಸೌಧ ಮುಂಭಾಗದಲ್ಲಿ ಬೇಡಿಕೆಯ ಕುರಿತು ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ ಮೂಲಕ ಕಾರ್ಯಕರ್ತರು ಸರಕಾರಕ್ಕೆ ಒತ್ತಾಯಿಸಿದರು.
ಕಲ್ಯಾಣ ವೇದಿಕೆಯ ರಾಜ್ಯಾಧ್ಯಕ್ಷ ಶರಣು ಕುಲ್ಕರ್ಣಿ, ಜೈರಾಮ್ ರಥೋಡ್, ಅನಿಲ್ ಕಾಟೇ, ಸಂತೋಷ್, ಸಾವನ್ ರಾಥೋಡ್ ಸೇರಿ ಹಲವು ಸದಸ್ಯರು ಈ ಮನವಿಯನ್ನು ಅಧಿಕಾರಿಗಳಿಗೆ ಮಂಡಿಸಿದರು. ತಾಲ್ಲೂಕಿನ ಹಳ್ಳಿಗಳಲ್ಲಿ ನೇಟೆ ರೋಗದಿಂದ ತೊಗರಿ ಬೆಳೆ ಸಂಪೂರ್ಣ ನಾಶವಾದುದಕ್ಕೆ ರೈತರಿಗೆ ಸರಕಾರ ತಕ್ಷಣ ಪರಿಹಾರದ ಮೊತ್ತವನ್ನು ನೀಡಿ ಅವರ ಮುಂದಿನ ಕೃಷಿ ಹಂಗಾಮಿಗೆ ಅನುಕೂಲ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಬೆಳೆಯ ಸಂಪೂರ್ಣ ನಾಶವು ರೈತರಿಗೆ ಆರ್ಥಿಕ ಸಂಕಷ್ಟವನ್ನು ತರುತ್ತಿದ್ದು, ಸರಕಾರವು ತಕ್ಷಣ ಎಚ್ಚೆತ್ತು, ಎಕರೆಗೆ 20,000 ರೂ. ಪರಿಹಾರ ಘೋಷಿಸಬೇಕೆಂದು ಸಂಘದ ಪ್ರಮುಖರು ಮನವಿ ಸಲ್ಲಿಸಿ, ರೈತರು ನ್ಯಾಯಕ್ಕಾಗಿ ನೀಡಿರುವ ಈ ಮನವಿಗೆ ತುರ್ತಾಗಿ ಕ್ರಮ ಕೈಗೊಂಡು ಪರಿಹಾರ ಒದಗಿಸಲು ಸರಕಾರ ಮುಂದಾಗಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರರು ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





