ರಾಯಚೂರು : ಜಿಲ್ಲೆಯ ಅನೇಕ ವರ್ಷಗಳ ಬೇಡಿಕೆಯಾಗಿದ್ದ, ನೂತನ ಮಿನಿ ವಿಧಾನಸೌಧ ಹೊಸವರ್ಷದ ನಿಮಿತ್ತವಾಗಿ ಜನವರಿಯಲ್ಲಿ ಕಾರ್ಯಾರಂಭ ಮಾಡುವ ಮೂಲಕ ಸರ್ಕಾರ ಸಾರ್ವಜನಿಕರಿಗೆ, ಸಿಬ್ಬಂದಿಗೆ ಹೊಸ ವರ್ಷದ ಗಿಫ್ಟ್ ನೀಡಲು ಸಜ್ಜಾಗಿದೆ.
ನಗರದ ಹೊರವಲಯದ ಯಕ್ಲಾಸಪೂರ ಗ್ರಾಮದಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಾಣದ ಕಾಮಗಾರಿಗೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದರು.
ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅಂದುಕೊಂಡಂತೆ ಆದರೆ ಜನವರಿ ಮೊದಲನೆ ವಾರ ನೂತನ ಮಿನಿ ವಿಧಾನಸೌಧ ಕಾರ್ಯಾರಂಭವಾಗಲಿದೆ ಎಂದು ತಿಳಿದುಬಂದಿದೆ.
ದಶಕಗಳಿಂದ ಸಾಥ್ ಕಚೇರಿಯಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿ ಜೊತೆಗೆ ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. ರಾಯಚೂರು ನಗರದಲ್ಲಿಯೇ ಇರುವುದರಿಂದ ನಗರ ಮತ್ತು ತಾಲ್ಲೂಕುಗಳ ಜನರಿಗೆ ಬಂದು ಹೋಗಲು ಅನುಕೂಲವಾಗಿತ್ತು, ಇದೀಗ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧವು ನಗರ ಕೇಂದ್ರದಿಂದ 5 ಕಿ.ಮಿ ದೂರದಲ್ಲಿರುವುದರಿಂದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಗೂ ನಗರ ಪ್ರದೇಶದ ನಾಗರೀಕರಿಗೆ ಓಡಾಟಕ್ಕೆ ಆರಂಭದಲ್ಲಿ ಸಮಸ್ಯೆ ಎದುರಾದರೂ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎನ್ನುವ ಆಶಾಭವನೆಯೊಂದಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾರ್ವಜನಿಕರು ಹೊಸ ಮಿನಿ ವಿಧಾನಸೌಧಕ್ಕೆ ತೆರಳಲು ಸಿದ್ಧರಾಗಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ, ಸಂಚಾರ ದಟ್ಟಣೆ, ಒಂದೇ ಸೂರಿನಡಿ ಸರ್ಕಾರಿ ಇಲಾಖೆಗಳನ್ನು ತರುವುದು, ವಿವಿಧ ತಾಲ್ಲೂಕುಗಳ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯ ಯಕ್ಲಾಸಪುರ ಸಮೀಪದ 18 ಎಕರೆ ಜಮೀನಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಜಿಲ್ಲಾಡಳಿತ ಭವನ ನಿರ್ಮಿಸಲಾಗಿದೆ. ಸುಣ್ಣ-ಬಣ್ಣ, ಜಂಗಲ್ ಕಟ್ಟಿಂಗ್, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗುಣಟ್ಟದ ಅಂತರ್ಜಾಲ ಸೇವೆ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅಂತಿಮ ಹಂತದ ಕೆಲಸ-ಕಾರ್ಯಗಳು ಭರದಿಂದ ಸಾಗಿವೆ.
ಪರ-ವಿರೋಧಗಳ ನಡುವೆ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ ಕಾರ್ಯಾರಂಭಗೊಳ್ಳಲು ಪೂರ್ವ ತಯಾರಿ ವೇಗವಾಗಿ ನಡೆಯುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

