Breaking News

ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಶಿಫಾರಸು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರವರ್ಗ-1ರಲ್ಲಿರುವ ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಇಲ್ಲಿನ ಅರಮನೆ ಮೈದಾನದಲ್ಲಿ ಭಾನುವಾರ‌ ಬೆಂಗಳೂರಿನ ಮೊಗವೀರ ಸಂಘ ಆಯೋಜಿಸಿದ್ದ ‘ಬೃಹತ್ ಮೊಗವೀರ ಸಮಾವೇಶ- ಸುವರ್ಣ ಪಥ’ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮೊಗವೀರ ಅಥವಾ ಕೋಲಿ ಸಮಾಜ, ಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂದು ಕುಲಾಶಾಸ್ತ್ರ ಅಧ್ಯಯನ ಮಾಡಿಸಿದ್ದೆ. ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ. ಆದರೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿಲ್ಲ. ನೀವ್ಯಾರೂ ಅದನ್ನು ಪ್ರಶ್ನೆ ಮಾಡಲೇ ಇಲ್ಲ’ ಎಂದು ಹೇಳಿದರು.
ನೀವೆಲ್ಲ ಸೇರಿ ಮೊಗವೀರ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂದು ಈ ಸಮಾವೇಶದಲ್ಲಿ ನಿರ್ಣಯ ತೆಗೆದುಕೊಂಡು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ. ನಾನು ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ. ನೀವು ಕೇಂದ್ರದ ಮೇಲೆ ಒತ್ತಡ ತನ್ನಿ’ ಎಂದು ಸಲಹೆ ನೀಡಿದರು.
ಮೊಗವೀರರು ಹಿಂದುಳಿದ ಜನಾಂಗಕ್ಕೆ ಸೇರಿದ್ದೀರಿ. ಆದರೂ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದೀರಿ. ನಮ್ಮ ಸರ್ಕಾರ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿ ಎಲ್ಲ ಜಾತಿ, ಧರ್ಮದ ಬಡವರೊಂದಿಗಿದೆ. ನಿಮ್ಮ ಸಮುದಾಯದ ಬೇಡಿಕೆಗಳು ಏನಿವೆ ಎಂದು ಮುಂಚಿತವಾಗಿ ತಿಳಿಸಿ. ಬಜೆಟ್‌ನಲ್ಲಿ ಆದ್ಯತೆ ಮೇಲೆ ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದೂ ಆಶ್ವಾಸನೆ ನೀಡಿದರು.
ಸಮುದಾಯದ ಮುಖಂಡ ಜೆ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮಂಗಳೂರು, ಮಲ್ಪೆ, ಗಂಗೊಳ್ಳಿ, ದಕ್ಷಿಣ ಕನ್ನಡದ ಬಂದರುಗಳನ್ನು ದುರಸ್ತಿಗೊಳಿಸಿ. ಮೀನುಗಾರ ಸಮುದಾಯಕ್ಕೊಂದು ಏರ್ ಆಂಬ್ಯುಲೆನ್ಸ್ ವ್ಯವಸ್ಥೆಯಾಗಬೇಕು. ಮೀನುಗಾರರಿಗೆ ಸಂಬಂಧಿಸಿ ಸಮಗ್ರ ನೀತಿಯೊಂದನ್ನು ಜಾರಿಗೊಳಿಸುವಂತೆ’ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ‘ರೈತರು ಕೃಷಿ ಮಾಡುವಂತೆ, ಮೊಗವೀರರು ಮೀನು ಹಿಡಿಯುವ ಕಾಯಕ‌ ಮಾಡುತ್ತಾರೆ. ರೈತರಿಗೆ ಸಿಗುವ ಸಾಲ ಮನ್ನಾ, ಬಡ್ಡಿ ಮನ್ನಾ ರೀತಿಯ ಅನುಕೂಲ, ಸೌಲಭ್ಯಗಳನ್ನು ಮೀನುಗಾರರಿಗೂ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಕೇಂದ್ರ, ರಾಜ್ಯ ಸರ್ಕಾರ ಮೀನುಗಾರ ಸಮುದಾಯಕ್ಕೆ ಅನುದಾನ ನೀಡಬೇಕು. ಸದ್ಯವೇ ಮಂಡಿಸುವ ಬಜೆಟ್‌ನಲ್ಲಿ ಮೀನುಗಾರಿಕೆಗೆ ಹೆಚ್ಚು ಅನುದಾನ ನೀಡಬೇಕು’ ಎಂದು ಸಿ.ಎಂ ಅವರಲ್ಲಿ ಕೋರಿದರು.
ಸುವರ್ಣ ಪಥ’ ಕಾರ್ಯಕ್ರಮದ ನೆನಪಿಗಾಗಿ ಹೊರ ತಂದಿರುವ ‘ಕಡಲೊಳಗಿನ ಪುಟಗಳು’- ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ ಮಾತನಾಡಿದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಕೆ.ಗುಣಕರ್, ಸಮುದಾಯದ ಮುಖಂಡರಾದ ಜಯ ಸಿ. ಕೋಟ್ಯಾನ್, ರಾಜು ಮೆಂಡನ್, ಉದಯ್ ಕುಮಾರ್ ಹಟ್ಟಿಯಂಗಡಿ, ಸತೀಶ್ ಎಸ್. ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *