ಜಾಲಹಳ್ಳಿ: ಕನಕ ಗುರು ಪೀಠದಲ್ಲಿಯೇ ಶಿವಸಿದ್ಧ ಯೋಗ ವಿದ್ಯಾಮಂದಿರ ನಿರ್ಮಾಣಕ್ಕೆ ನಗರಾಭಿವೃದ್ಧಿ ಸಚಿವ ಕೆ.ಎಸ್ ಸುರೇಶ ಬೈರತಿ ಅವರು ವೈಯಕ್ತಿಕವಾಗಿ ₹50ಲಕ್ಷ ದೇಣಿಗೆ ನೀಡಲು ಘೋಷಣೆ ಮಾಡಿದರು.
ಇಂದು ಸಮೀಪದ ತಿಂಥಣಿ ಬ್ರಿಜ್ ಹತ್ತಿರದ ಕಲಬುರಗಿ ವಿಭಾಗದ ಕನಕಗುರು ಪೀಠದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಮೂರು ದಿನಗಳ ವರೆಗೆ ಹಮ್ಮಿಕೊಂಡ ಹಾಲುಮತ (ಸಿದ್ಧ-ನಾಥ) ಸಂಸ್ಕೃತಿ ವೈಭವದ ಮೊದಲ ದಿನದ ಕಾರ್ಯಕ್ರಮ ದಲ್ಲಿ ವಿದ್ಯಾಮಂದಿರದ ಶಿಲಾನ್ಯಾಸ ಮಾಡಿ ಮಾತನಾಡಿದರು.
12ನೇ ಶತಮಾನದಲ್ಲಿ ಕಂಡ ಶರಣರ ಕನಸು ನನಸು ಮಾಡಲು ಹಾಗೂ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿಯೇ ತಮ್ಮ ಜೀವನದ ಧೈಯವಾಗಿಸಿಕೊಂಡು ಅಧಿಕಾರ ಮಾಡುವಂತಹ ರಾಜ್ಯದ ಮುಖ್ಯಮಂತ್ರಿಗಳಿಗೆ ನಿಮ್ಮ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿರುವ 60 ಲಕ್ಷ ಕುರುಬರು ಮಾತ್ರ ಅವರ ಬೆಂಬಲಕ್ಕೆ ಇದ್ದರೆ ಸಾಲದು. ರಾಜ್ಯ ಬಡವರು, ಹಿಂದೂಳಿದ ವರ್ಗದವರು ಕೂಡ ಸೇರಬೇಕು. ಅವರು ಜಾರಿಗೆ ತಂದಿರುವ
ಯೋಜನೆಗಳು ಎಲ್ಲಾ ವರ್ಗದ ಜನತೆಗೆ ಅನುಕೂಲವಾಗಿದೆ. ಅಲ್ಲದೇ ಯಾವುದೇ ಸೌಲಭ್ಯ ನೀಡುವಾಗ ನ್ಯಾಯ ಬದ್ಧವಾಗಿದ್ದಾರೆ ಮಾತ್ರ ಅವರು ಮಾಡುವುದು ಇಲ್ಲವಾದರೆ ಅ ಸಾಧ್ಯವಾದ ಮಾತು ಎಂದು ಹೇಳಿದರು.
ಬೆಂಗಳೂರು ನಗರದ ಗಾಂಧಿನಗರದಲ್ಲಿ ಸುಮಾರು ನೂರು ವರ್ಷಗಳ ಹಳೆಯ ನಿವೇಶನ ಕಟ್ಟಡ ಕುರುಬ ಸಮಾಜಕ್ಕೆ ಸೇರಿದ್ದು ಇತ್ತು. ಅದನ್ನು ಉಳಿಸಿಕೊಂಡು ಹಳೆಯ ಕಟ್ಟಡ ತೆರವುಗೊಳಿಸಿ ಕೇಂದ್ರ ಕುರುಬ ಸಂಘದ ಹೊಸ ಕಟ್ಟಡ ನಿರ್ಮಾಣಕ್ಕೆ ₹40ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಸಮಾಜದ ಜನತೆ ಉಳಿದ ಸಮಾಜದ ಜನರೊಂದಿಗೆ ಪ್ರೀತಿ ವಿಶ್ವಾಸ ದಿಂದ ಬಾಳಬೇಕು. ಶಿಕ್ಷಣ, ಸಂಘಟನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.
ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮಿ ಮಾತನಾಡಿ, ರಾಜ್ಯದ ತುಂಬಾ ಕುರುಬ ಸಮಾಜಕ್ಕೆ ಸೇರಿದ ದೇವಸ್ಥಾನಗಳ ಪೂಜಾರಿಗಳಿಗೆ ಅನೇಕ ತೊಂದರೆಗಳು ಇದ್ದು. ಅಗತ್ಯ ಸೌಲಭ್ಯ ಒದಗಿಸಲು ಹಾಗೂ ಪರಿಹಾರಕ್ಕಾಗಿ ಕಳೆದ ಎರಡು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಮಾತುಕತೆಗೆ ಅವಕಾಶ ಕೊರಿದರೂ ಅವಕಾಶ ನೀಡದೇ ಇದ್ದರೆ, ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರಾದ ವೇಣುಗೋಪಾಲ ನಾಯಕ, ಚನ್ನಾರೆಡ್ಡಿ ಪಾಟೀಲ್, ಮಾನಪ್ಪ ವಜ್ಜಲ್, ಬಸನಗೌಡ ತುರುವಿಹಾಳ, ಬಸನಗೌಡ ದದ್ದಲ್, ಮಾಜಿ ಶಾಸಕ ರಾಜುಗೌಡ, ಕೆ.ಎಂ ರಾಮಚಂದ್ರಪ್ಪ, ಗ್ರಾ.ಪಂ ಅಧ್ಯಕ್ಷೆ ಮಲ್ಲಮ್ಮ ಗಣಜಲಿ, ಮುಖಂಡರಾದ ಸಿದ್ದಯ್ಯ ತಾತಾ ಗುರುವಿನ,ಅದನಗೌಡ ಪಾಟೀಲ್, ನಾಗವೇಣಿ, ಅರತಿ ಪುಷ್ಪವತಿ ಚಂದ್ರಶೇಖರ್, ಚಂದಪ್ಪ ಬುದ್ದಿನ್ನಿ, ವೇಣುಗೋಪಾಲ್ ನಾಯಕ, ವಿ.ಎಸ್ ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಕೀಲ ಮಹಾಂತೇಶ ಕೌಲಗಿ ಕಲಬುರಗಿ ಕಾರ್ಯಕ್ರಮ ನಿರ್ವಹಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

