ಕೊಪ್ಪಳ: ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ತರಹೇವಾರಿ ದಾಸೋಹವೇ ವಿಶೇಷ. ಪ್ರತಿವರ್ಷವೂ ಒಂದೊಂದು ರೀತಿಯಲ್ಲಿ ಸಿಹಿ ತಿನಿಸು ತಯಾರಿಸುವ ಸಿಂಧನೂರಿನ ಸಮಾನ ಮನಸ್ಕ ಗೆಳೆಯರ ಬಳಗದವರು ಈ ಬಾರಿ ಲಕ್ಷಾಂತರ ಜನರಿಗೆ ಸಾವಯವ ಬೆಲ್ಲದ ಜಿಲೇಬಿಗಳನ್ನು ಉಣಬಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಸ್ನೇಹಿತರ ತಂಡದ ಸದಸ್ಯರು ಹಿಂದಿನ ಎರಡು ವರ್ಷಗಳಿಂದ ಐದು ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆಗಳನ್ನು ತಮ್ಮೂರಿನಲ್ಲಿ ತಯಾರಿಸಿಕೊಂಡು ಬಂದು ಇಲ್ಲಿನ ದಾಸೋಹಕ್ಕೆ ನೀಡಿದ್ದರು. ಈ ಸಲ ಗವಿಮಠದ ಆವರಣದಲ್ಲಿಯೇ ಜಿಲೇಬಿ ತಯಾರಿಸುತ್ತಿದ್ದಾರೆ.
12ರಿಂದ 15 ಲಕ್ಷ ಜಿಲೇಬಿಗಳನ್ನು ತಯಾರಿಸಲಾಗುತ್ತಿದ್ದು, ಇದಕ್ಕಾಗಿ 50 ಕ್ವಿಂಟಲ್ ಮೈದಾಹಿಟ್ಟು, 125 ಕ್ವಿಂಟಲ್ ಸಾವಯವ ಬೆಲ್ಲ, 200 ಲೀಟರ್ ತುಪ್ಪ, 10 ಕೆ.ಜಿ. ಯಾಲಕ್ಕಿ, 200 ಲೀಟರ್ ಮೊಸರು ಬಳಕೆ ಮಾಡಲಾಗುತ್ತಿದೆ. ಜಿಲೇಬಿ ತಯಾರಿಸುವವರು, ಸಾಮಗ್ರಿ ತಂದುಕೊಡುವವರು, ಅದನ್ನು ಡಬ್ಬಿಯಲ್ಲಿ ಜೋಡಿಸಿ ಇಡುವವರು ಹೀಗೆ ಬೇರೆ ಬೇರೆ ಹಂತಗಳಲ್ಲಿ 500ಕ್ಕೂ ಹೆಚ್ಚು ಕಾರ್ಮಿಕರು ಒಂದೇ ಜಾಗದಲ್ಲಿ ಜಿಲೇಬಿ ತಯಾರಿಸುವುದರಲ್ಲಿ ತೊಡಗಿದ್ದಾರೆ.
ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ನಡೆಯುವ ಜ. 15ರಂದು ಮತ್ತು ಅದರ ಮರುದಿನ ಭಕ್ತರಿಗೆ ಜಿಲೇಬಿಗಳನ್ನು ದಾಸೋಹದಲ್ಲಿ ನೀಡಲಾಗುತ್ತದೆ. ಇವೆಲ್ಲವೂ ತಯಾರಿಕೆಯ ಒಂದು ಭಾಗವಾದರೆ ಲಕ್ಷಾಂತರ ಜಿಲೇಬಿಗಳನ್ನು ಹೇಗೆ ತಯಾರಿಸಲಾಗುತ್ತಿದೆ ಎನ್ನುವ ಕುತೂಹಲ ಇಟ್ಟುಕೊಂಡು ಜನ ಜಿಲೇಬಿ ತಯಾರಿಕೆ ನೋಡಲು ಗವಿಮಠಕ್ಕೆ ಬರುತ್ತಿದ್ದಾರೆ.
ಜಿಲೇಬಿ ತಯಾರಿಸಲು ಅಂದಾಜು ₹17 ಲಕ್ಷದಿಂದ ₹18 ಲಕ್ಷ ಖರ್ಚಾಗುತ್ತಾದೆ. ಅನೇಕ ದಾನಿಗಳು, ಮಠದ ಭಕ್ತರು ತಮಗೆ ಸಾಧ್ಯವಾದಷ್ಟು ಹಣ ನೀಡುತ್ತಾರೆ. ಸಿಂಧನೂರಿನ ವಿಜಯಕುಮಾರ ಎನ್ನುವವರು ಪ್ರತಿವರ್ಷ ಸಿಹಿ ತಿನಿಸು ತಯಾರಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಜಿಲೇಬಿ ತಯಾರಿಸಲು ಅನೇಕರು ಸೇವಾಮನೋಭಾವದಿಂದ ಬರುತ್ತಾರೆ. ಇನ್ನು ಕೆಲವರನ್ನು ಹಣ ನೀಡಿ ಕೆಲಸಕ್ಕೆ ಕರೆದುಕೊಂಡು ಬರಲಾಗಿದೆ’ ಎಂದು ಸಮಾನ ಮನಸ್ಕ ಸ್ನೇಹಿತರ ತಂಡದ ಪ್ರಮುಖ ಸಂಗಪ್ಪ ಗೋರೆಬಾಳ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





