ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ ನಡೆದು ಒಂದು ದಿನವಾದರೂ ಗುರುವಾರ ದಿನಪೂರ್ತಿ ಎಲ್ಲಿ ನೋಡಿದರೂ ಜನವೋ ಜನ. ಬೆಳಗಿನ ಜಾವದಿಂದಲೇ ಜನ ಪಾದಯಾತ್ರೆ ಹಾಗೂ ವಾಹನಗಳ ಮೂಲಕ ಬಂದು ಗವಿಮಠದ ದರ್ಶನ ಪಡೆದರು.
ಸಂಜೆ ಹೊತ್ತು ಏರುತ್ತಿದ್ದಂತೆ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಲೇ ಇತ್ತು.
ದಿನಪೂರ್ತಿ ನಡೆದ ಕ್ರೀಡಾಕೂಟಗಳು, ವಿವಿಧ ವಸ್ತುಪ್ರದರ್ಶನಗಳು ಹಾಗೂ ಆಟಿಕೆಗಳು ಜನರ ಗಮನ ಸೆಳೆದವು.
ಅನ್ವೇಷಣೆ: ಮಠದ ಶಾಂತವನದಲ್ಲಿ ನಡೆದ ಅನ್ವೇಷಣೆ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಕಜ್ಜಿದೋಣಿಯ ದೇವಾನಂದ ಶರಣರು ಅನ್ವೇಷಣೆ ಅಧ್ಯಾತ್ಮ ಪ್ರವಚನದಲ್ಲಿ ನಿಜಗುಣ ಶಿವಯೋಗಿಗಳವರ ಕೈವಲ್ಯ ಪದ್ಧತಿ ಐದನೇ ಪದ್ಯದಲ್ಲಿರುವ ‘ಪಡೆವೆ ನೀ ಪರ್ವ ಮುಕ್ತಿ ಸುಖವ’ ವಿಷಯ ಕುರಿತು ಮಾತನಾಡಿದರು. ಕಾಕರಗಲ್‌ನ ಹನುಮಂತರಾಯ ಜೀವ ಮತ್ತು ಆತ್ಮ ಕುರಿತು ಮಾಹಿತಿ ಹಂಚಿಕೊಂಡರು.
ದಿನಪೂರ್ತಿ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ಜಾತ್ರೆಯ ಎರಡನೇ ದಿನವಾದ ಗುರುವಾರ ಜೋಳದ ರೊಟ್ಟಿ, ಹೆಸರುಕಾಳು ಪಲ್ಲೆ, ಬದನೆಕಾಯಿ ಪಲ್ಲೆ, ಮಿರ್ಚಿ, ಮಾದಲಿ, ತುಪ್ಪ, ಹಾಲು, ಜಿಲೇಬಿ, ಅನ್ನ, ಸಾಂಬಾರು, ಪುಡಿ, ಉಪ್ಪಿನಕಾಯಿ, ಕೆಂಪುಚಟ್ನಿ ನೀಡಲಾಯಿತು.
ಪ್ರತಿವರ್ಷದ ಸಂಪ್ರದಾಯದಂತೆ ಶಿವಶಾಂತವೀರ ಶರಣರು ದೀರ್ಘದಂಡ ನಮಸ್ಕಾರ ಹಾಕಿದರು. ಬಳಗಾನೂರಿನ ಸ್ವಾಮೀಜಿ ಮಠದ ಮಹಾದ್ವಾರದಿಂದ ಪ್ರಾರಂಭಿಸಿ ಗವಿಮಠದ ಬೆಟ್ಟದ ಮೇಲಿನ ಮರಿಶಾಂತವೀರ ಶಿವಯೋಗಿಗಳ ಗದ್ದುಗೆ ತನಕ ಹೂವಿನ ಹಾಸಿಗೆಯ ಮೇಲೆ ದೀರ್ಘದಂಡ ನಮಸ್ಕಾರ ಹಾಕಿದರು. ಹೊಂಬಳ, ಚಿಕ್ಕೇನಕೊಪ್ಪ, ಸೂಡಿ ಗ್ರಾಮದ ಭಜನಾ ಮಂಡಳಿಗಳಿಂದ ಭಕ್ತಿಗೀತೆಗಳು, ಜಯಘೋಷಗಳು, ಭಕ್ತಿಭಾವದ ಘೋಷಣೆಗಳು ಮೊಳಗಿದವು.
bigtvnews | Hubli Dharwad News | Kannada News | Karnataka News Hubli News | News In Hubli | Local news

