ಕಲಬುರಗಿ: ಕಂದಾಯ ದಾಖಲೆಗಳ ಡಿಜಟಲೀಕರಣದಿಂದ ಭವಿಷ್ಯದಲ್ಲಿ ಅಕ್ರಮ ತಡೆಯಲು ಸಾಧ್ಯವಾಗಲಿದೆ. ಜೊತೆಗೆ ಸಾರ್ವಜನಿಕರ ಕೈಗೂ ದಾಖಲೆಗಳು ಸರಳವಾಗಿ ಸಿಗುವಂತಾಗಲಿದೆ’ ಎಂದು ಐ.ಟಿ.-ಬಿ.ಟಿ. ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕಂದಾಯ ದಾಖಲೆಗಳ ಡಿಜಿಟಲೀಕರಣಗೊಳಿಸುವ ‘ಭೂ ಸುರಕ್ಷಾ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭೂ ಸುರಕ್ಷಾ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕು ಆಯ್ದುಕೊಳ್ಳಲಾಗಿತ್ತು. 2024ರ ಮಾರ್ಚ್ 1ರಂದು ಕಂದಾಯ ದಾಖಲೆಗಳ ಡಿಜಿಟಲೀಕರಣ ಕಾರ್ಯ ಆರಂಭಿಸಲಾಗಿತ್ತು. 100 ದಿನಗಳಲ್ಲಿ ಅದನ್ನು ಪೂರ್ಣಗೊಳಿಸುವ ಗುರಿಯಿತ್ತು. ಆದರೆ, ಚುನಾವಣೆ, ಸಂಪನ್ಮೂಲ ಕೊರತೆ, ತಾಂತ್ರಿಕ ತೊಂದರೆಯಂಥ ಕಾರಣಗಳಿಂದ ಡಿಜಿಟಲೀಕರಣ ವಿಳಂಬವಾಗಿ ನವೆಂಬರ್‌ನಲ್ಲಿ ಪೂರ್ಣಗೊಂಡಿದೆ. ಒಟ್ಟು 16,52,274 ಪುಟಗಳ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ’ ಎಂದರು.
ಯೋಜನೆಯ ಪ್ರಾಯೋಗಿಕ ಅನುಷ್ಠಾನದಲ್ಲಿ ಎದುರಾದ ಸವಾಲುಗಳಿಂದ ಪಡೆದ ಅನುಭವ ಬಳಸಿ, ಜಿಲ್ಲೆಯ ಮಿಕ್ಕುಳಿದ ತಾಲ್ಲೂಕುಗಳ ಕಂದಾಯ ಇಲಾಖೆಯ ‘ಎ’ ಹಾಗೂ ‘ಬಿ’ ಶ್ರೇಣಿಯ ಎಲ್ಲಾ ದಾಖಲೆಗಳ ಡಿಜಿಟಲೀಕರಣ ನಡೆಯಲಿದೆ. ಈ ಕಾರ್ಯಕ್ಕಾಗಿ ಚಿಂಚೋಳಿ ಹೊರತು ಪಡಿಸಿ ಪ್ರತಿ ತಾಲ್ಲೂಕಿಗೆ ತಲಾ ಆರು ಕಂಪ್ಯೂಟರ್ ಆಪರೇಟರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ’ ಎಂದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ‘ಜಿಲ್ಲೆಯ ಒಂದೊಂದೇ ಗ್ರಾಮಗಳನ್ನು ಆಯ್ದುಕೊಂಡು ಅವುಗಳ ಕಂದಾಯ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗುವುದು. ಮುಂದಿನ ಒಂದು ವರ್ಷದಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ, ಶಾಸಕರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಮೇಯರ್ ಯಲ್ಲಪ್ಪ ನಾಯಕೊಡಿ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಎಡಿಸಿ ರಾಯಪ್ಪ ಹುಣಸಗಿ, ಎ.ಸಿ. ಸಾಹಿತ್ಯ ಆಲದಕಟ್ಟಿ, ಪ್ರೊಬೇಷನರ್ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ, ತಹಶೀಲ್ದಾರ್ ಕೆ.ಆನಂದಶೀಲ ಸೇರಿದಂತೆ ಹಲವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

