Breaking News

ಕಲಬುರಗಿ: ಅಭಿವೃದ್ದಿಗೆ ಬಳಕೆಯಾಗದೆ ಕೈತಪ್ಪಿದ ₹3,472 ಕೋಟಿ

ಕಲಬುರಗಿ: ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ನೀಡಿದ್ದ ವರದಿಯ ಮಾನದಂಡದ ಅನ್ವಯ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ 29 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯ ಆಶಯಗಳು ಸಾಕಾರಗೊಳಿಸಿಲ್ಲ.
ನಂಜುಡಪ್ಪ ಅಧ್ಯಕ್ಷತೆ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ 114 ತಾಲ್ಲೂಕುಗಳ ಪೈಕಿ ಕಲ್ಯಾಣ ಕರ್ನಾಟಕ ಭಾಗದ 29 ತಾಲ್ಲೂಕುಗಳಿವೆ. ಅವುಗಳಲ್ಲಿ ಎರಡು ಹಿಂದುಳಿದ, ಐದು ಅತಿ ಹಿಂದುಳಿದ ಹಾಗೂ 22 ಅತ್ಯಂತ ಹಿಂದುಳಿದ ತಾಲ್ಲೂಕಗಳಿವೆ.
2007-08ರಿಂದ 2023-24ರ ಅವಧಿಯ 17 ವರ್ಷಗಳಲ್ಲಿ ಹಿಂದುಳಿದ 29 ತಾಲ್ಲೂಕುಗಳಿಗೆ ₹14,678.70 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ಅದರಲ್ಲಿ ₹12,432.83 ಕೋಟಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಅನುದಾನದ ಪೈಕಿ ₹11,206.20 ಕೋಟಿ ಬಳಕೆಯಾಗಿದೆ. ₹3,472.50 ಕೋಟಿಯಷ್ಟು ಅನುದಾನ ಅಭಿವೃದ್ಧಿ ಯೋಜನೆಗೆ ಬಳಕೆಯಾಗದೆ ಕೈತಪ್ಪಿದೆ ಎಂಬುದು ತಿಳಿದು ಬಂದಿದೆ.
ಕಲಬುರಗಿ ಜಿಲ್ಲೆಯಲ್ಲಿ ಕಲಬುರಗಿ ತಾಲ್ಲೂಕು (ಹಿಂದುಳಿದ) ಹೊರತುಪಡಿಸಿ ಸೇಡಂ, ಚಿತ್ತಾಪುರ, ಅಫಜಲಪುರ, ಆಳಂದ, ಚಿಂಚೋಳಿ ಹಾಗೂ ಜೇವರ್ಗಿ ತಾಲ್ಲೂಕುಗಳು ಅತ್ಯಂತ ಹಿಂದುಳಿದಿವೆ. ಅವುಗಳಿಗೆ ₹4,067 ಕೋಟಿ ನಿಗದಿಯಾಗಿದ್ದರೂ ಬಿಡುಗಡೆಯಾಗಿದ್ದು ₹3,510 ಕೋಟಿ. ಅದರಲ್ಲಿ ₹3,156 ಕೋಟಿ ಖರ್ಚಾಗಿದ್ದು, ₹911 ಕೋಟಿ ಅನುದಾನ ಅಭಿವೃದ್ಧಿ ಯೋಜನೆಗಳಿಗೆ ಬಂದೇ ಇಲ್ಲ.
ಕಲಬುರಗಿ ನಂತರದಲ್ಲಿ ಅತಿ ಹೆಚ್ಚು ಅನುದಾನ ಅವಿಭಾಜಿತ ಬಳ್ಳಾರಿ ಜಿಲ್ಲೆಗೆ ಹಂಚಿಕೆಯಾಗಿದೆ. ಅತಿ ಹಿಂದುಳಿದ ಹಗರಿಬೊಮ್ಮನಹಳ್ಳಿ ಹಾಗೂ ಹಡಗಲಿ, ಅತ್ಯಂತ ಹಿಂದುಳಿದ ಸಂಡೂರು, ಕೂಡ್ಲಗಿ ಹಾಗೂ ಹರಪ್ಪನಹಳ್ಳಿ ತಾಲ್ಲೂಕುಗಳಿಗೆ ₹2,786 ಕೋಟಿ ಅನುದಾನ ನಿಗದಿಯಾಗಿದೆ. ಅದರಲ್ಲಿ ₹2,458 ಕೋಟಿ ಬಿಡುಗಡೆಯಾಗಿದ್ದು, ₹2,111 ಕೋಟಿ ಖರ್ಚಾಗಿದೆ. ₹675 ಕೋಟಿ ಅನುದಾನ ಕೈತಪ್ಪಿದೆ.
ನಂಜುಡಪ್ಪ ವರದಿಯ ಶಿಫಾರಸಿನಂತೆ ಅನುದಾನ ನಿಗದಿ ಮಾಡುತ್ತಿದ್ದರೂ ಅದು ಬಿಡುಗಡೆಯಾಗಿ, ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿ ಅಭಿವೃದ್ಧಿಯಿಂದ ನಳನಳಿಸಬೇಕಿದ್ದ ಹಿಂದುಳಿದ ತಾಲ್ಲೂಕುಗಳು ಇನ್ನಷ್ಟು ಹಿಂದುಳಿದಿವೆ ಎನ್ನುತ್ತಾರೆ ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರು.
ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅತಿ ಹಿಂದುಳಿದ ತಾಲ್ಲೂಕುವಾರು ಹೇಗೆ, ಯಾವ್ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಬೇಕು ಎಂಬುದರ ನೀಲನಕ್ಷೆಯನ್ನು ಸಮಿತಿಯೇ ಮುಂದಿಟ್ಟಿದೆ. ಆದರೆ, ಸರ್ಕಾರವು ಸಮರ್ಪಕವಾಗಿ ಅನುದಾನ ಒದಗಿಸಿ, ಬಿಡುಗಡೆಯಾದ ಅನುದಾನವೂ ಹಾಕಿಕೊಂಡ ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗಿದೆಯೇ ಎಂಬುದರ ಪರಿಶೀಲನೆ ನಡೆಸುತ್ತಿಲ್ಲ ಎಂಬುದು ಸ್ಥಳೀಯರ ಬೇಸರ.
– ಲಕ್ಷ್ಮಣ ದಸ್ತಿ, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷಶಾಸಕರ ಪತ್ರಗಳ ಮೇಲೆ ಒಂದು ವರ್ಷಕ್ಕೆ ಕ್ರಿಯಾ ಯೋಜನೆ ರೂಪಿಸುವ ಬದಲು ಮುಂದಿನ 10 ವರ್ಷಗಳ ಮುಂದಾಲೋಚನೆ ಇರಿಸಿಕೊಂಡು ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿದರೆ ಅನುದಾನ ಖರ್ಚಾಗುತ್ತದೆ.

Share News

About bigtvnews22

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *